

ಕೋಝಿಕೋಡ್: ಯೆಮೆನ್‌ನಲ್ಲಿ ಬುಧವಾರ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಬೇಕಾಗಿತ್ತು. ಆದರೆ ಪ್ರಭಾವಿ ಸುನ್ನಿ ಮುಸ್ಲಿಂ ಧರ್ಮಗುರು ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯ ಪ್ರವೇಶದ ನಂತರ ಶಿಕ್ಷೆ ಮುಂದೂಡಲಾಗಿದೆ. ಹೀಗಾಗಿ ಸದ್ಯಕ್ಕೆ ನಿಮಿಷಾ ಪ್ರಿಯಾ ಅವರು ಗಲ್ಲು ಶಿಕ್ಷೆಯಿಂದ ಬಚಾವ್ ಆಗಿದ್ದಾರೆ,
ಕೇರಳದಲ್ಲಿರುವ ನರ್ಸ್ ನಿಮಿಷಾ ಅವರ ಕುಟುಂಬ ದೊಡ್ಡ ಮೊತ್ತದ ಪರಿಹಾರ ನೀಡಲೂ ಸಿದ್ಧರಿದ್ದರೂ, ಯೆಮೆನ್‌ನಲ್ಲಿರುವ ಮೃತ ವ್ಯಕ್ತಿ ತಲಾಲ್ ಅಬ್ದೋ ಮಹ್ದಿ ಅವರ ಸಹೋದರ ಮಾತ್ರ ಬ್ಲಡ್ ಮನಿ(ಮೃತರ ಕುಟುಂಬಕ್ಕೆ ಅವರು ಕೇಳಿದಷ್ಟು ಆರ್ಥಿಕ ಸಹಾಯ ನೀಡುವುದು) ಸ್ವೀಕರಿಸಲು ಒಪ್ಪಿಕೊಂಡಿಲ್ಲ. ಹೀಗಾಗಿ ಪ್ರಕರಣ ಇನ್ನಷ್ಟು ಜಟಿಲವಾಗಿದೆ.
ಕಿಸಾಸ್ ಪ್ರಕಾರವೇ ದೇವರ ಕಾನೂನನ್ನು ಕಟ್ಟುನಿಟ್ಟಾಗಿ ಅನ್ವಯಿಸಬೇಕು ಎಂದು ಮೃತನ ಕುಟುಂಬ ಪಟ್ಟು ಹಿಡಿದಿದೆ. ಇದು ನಿಮಿಷಾ ಪ್ರಿಯಾ, ಅವರ ಕುಟುಂಬ ಮತ್ತು ಅವರ ಜೀವವನ್ನು ಉಳಿಸಲು ಪ್ರಯತ್ನಿಸುತ್ತಿರುವ ಒಳ್ಳೆಯ ಹೃದಯದ ಜನರಿಗೆ ತೀವ್ರ ಹಿನ್ನಡೆಯಾಗಿದೆ.
ಈ ಹಿಂದೆ, ನಿಮಿಷಾ ಪ್ರಿಯಾ ಅವರ ವಕೀಲ ಸುಭಾಷ್ ಚಂದ್ರನ್ ಕೆ ಆರ್ ಅವರು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಅವರ ಮೂಲಕ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬ ಸದಸ್ಯರಲ್ಲಿ ಒಬ್ಬರು ಮತ್ತು ಕೆಲವು ಸ್ಥಳೀಯ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದ್ದರು. "ಅವರ ಕುಟುಂಬವು ಬ್ಲಡ್ ಮನಿ ಸ್ವೀಕರಿಸುವಂತೆ ಮಾಡಲು ಮತ್ತು ಕೇರಳ ನರ್ಸ್ ಮರಣದಂಡನೆಯಿಂದ ಪಾರಾಗಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ" ಎಂದು ತಿಳಿಸಿದ್ದರು.
ಸುಬಾಶ್ ಚಂದ್ರನ್ ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್‌ನ ಭಾಗವಾಗಿದ್ದಾರೆ.
ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬವು ಬ್ಲಡ್ ಮನಿ ಸ್ವೀಕರಿಸಲು ನಿರಾಕರಿಸಿದೆ. ಆರೋಪಿಗೆ ಕ್ಷಮೆ ಇಲ್ಲ. ಗಲ್ಲು ಶಿಕ್ಷೆ ಜಾರಿಗೊಳಿಸಬೇಕು ಎಂದು ಪಟ್ಟು ಹಿಡಿದಿದೆ ಎಂಬ ಮಾಹಿತಿ ಬಂದಿದೆ.
ಗಲ್ಲು ಶಿಕ್ಷೆಗೆ ಬದಲಾಗಿ ಕ್ಷಮಾದಾನಕ್ಕೆ ಬ್ಲಡ್ ಮನಿ ಮೂಲಕ, ಕೊಲ್ಲಲ್ಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹಣವನ್ನು ಪಾವತಿಸುವ ಅಂಶ ಷರಿಯಾ ಕಾನೂನಿನಲ್ಲಿದೆ. ಇದನ್ನು, ಯೆಮೆನ್ , ಸೌದಿ ಅರೆಬಿಯಾ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತದೆ.
Advertisement