
ನವದೆಹಲಿ: ವಿಮಾನ ಅಪಘಾತಗಳ ತನಿಖೆಯಲ್ಲಿ ಸಹಾಯ ಮಾಡಲು ವಿಮಾನದ ಕಾಕ್‌ಪಿಟ್‌ಗಳಲ್ಲಿ ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸುವುದಕ್ಕೆ "ಬಲವಾದ ವಾದ" ಇದೆ ಎಂದು ಜಾಗತಿಕ ವಿಮಾನಯಾನ ಉದ್ಯಮ ಗ್ರೂಪ್ IATA ಮುಖ್ಯಸ್ಥರು ಬುಧವಾರ ಹೇಳಿದ್ದಾರೆ.
ಕಳೆದ ತಿಂಗಳ ಏರ್ ಇಂಡಿಯಾ ಪತನದ ಪ್ರಾಥಮಿಕ ತನಿಖಾ ವರದಿಯ ಬಿಡುಗಡೆಯ ನಂತರ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘ(IATA)ದ ಮಹಾನಿರ್ದೇಶಕ ವಿಲ್ಲಿ ವಾಲ್ಷ್ ಅವರ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ವಿಚ್‌ಗಳನ್ನು ಆಫ್ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖಾ ವರದಿ ಹೇಳಿದೆ.
ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ(AAIB) ಶನಿವಾರ ಬಿಡುಗಡೆ ಮಾಡಿದ ವರದಿಯು ಜೂನ್ 12 ರ ದುರಂತಕ್ಕೆ ಯಾವುದೇ ತೀರ್ಮಾನ ಅಥವಾ ಹೊಣೆಗಾರಿಕೆಯನ್ನು ಹೇಳಿಲ್ಲ. ಆದರೆ ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್ ಗೆ ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ ಎಂದು ಕೇಳಿದ್ದಾರೆ. ಎರಡನೇ ಪೈಲಟ್ ಇಲ್ಲ ನಾನು ಕಡಿತಗೊಳಿಸಿಲ್ಲ ಎಂದು ಪ್ರತಿಕ್ರಿಯಿಸಿದರು ಎಂದು ವರದಿ ಸೂಚಿಸಿದೆ.
ವಾಣಿಜ್ಯ ವಿಮಾನಯಾನ ಸಂಸ್ಥೆಯ ಮಾಜಿ ಪೈಲಟ್ ಆಗಿರುವ ವಾಲ್ಷ್, ಪೈಲಟ್‌ಗಳು, ಕಾಕ್‌ಪಿಟ್‌ನಲ್ಲಿ ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಲು ಹಿಂಜರಿಯುವುದನ್ನು ಅರ್ಥಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಆದರೆ "ವೈಯಕ್ತಿಕ ಆಧಾರದ ಮೇಲೆ, ನಾವು IATA ನಲ್ಲಿ ಇದರ ಬಗ್ಗೆ ಚರ್ಚಿಸದ ಕಾರಣ, ಅಪಘಾತ ತನಿಖೆಗಳಲ್ಲಿ ಸಹಾಯ ಮಾಡಲು ಕಾಕ್‌ಪಿಟ್‌ನಲ್ಲಿ ವಿಡಿಯೋ ಅಳವಡಿಸುವುದಕ್ಕೆ ಬಲವಾದ ವಾದವಿದೆ ಎಂದು" ಅವರು ವರದಿಗಾರರಿಗೆ ತಿಳಿಸಿದ್ದಾರೆ.
"ಧ್ವನಿ ರೆಕಾರ್ಡಿಂಗ್ ಜೊತೆಗೆ ವಿಡಿಯೋ ರೆಕಾರ್ಡಿಂಗ್ ಇದ್ದರೆ ತನಿಖಾಧಿಕಾರಿಗಳಿಗೆ ತನಿಖೆ ನಡೆಸಲು ಗಮನಾರ್ಹವಾಗಿ ಸಹಾಯ ಮಾಡುವ ಸಾಧ್ಯತೆಯಿದೆ" ಎಂದು ವಾಲ್ಷ್ ಹೇಳಿದ್ದಾರೆ.
ಇಂಧನ ಪೂರೈಕೆ ಸ್ವಿಚ್‌ಗಳು ಆಕಸ್ಮಿಕವಾಗಿ ಆಫ್ ಆಗುವುದನ್ನು ತಡೆಯಲು IATA ಕಾಕ್‌ಪಿಟ್‌ನಲ್ಲಿ ಮರುವಿನ್ಯಾಸ ಮಾಡುವಂತೆ ಶಿಫಾರಸು ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉದ್ಯಮ ಸಂಸ್ಥೆಯು ಹೆಚ್ಚು ವಿವರವಾದ ವರದಿಗಾಗಿ ಕಾಯಬೇಕಾಗುತ್ತದೆ ಮತ್ತು ಊಹಾಪೋಹಗಳನ್ನು ಮಾಡಬಾರದು ಎಂದು ವಾಲ್ಷ್ ಹೇಳಿದರು.
Advertisement