
ಮುಂಬೈ: ಅಮಾನವೀಯ ಘಟನೆಯೆಂಬಂತೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 19 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿ ಆಕೆ ಮತ್ತು ಆಕೆಯ ಪತಿ ಎಂದು ಹೇಳಿಕೊಂಡ ವ್ಯಕ್ತಿ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದ ಘಟನೆ ನಡೆದಿದೆ.
ನಿನ್ನೆ ಮಂಗಳವಾರ ಬೆಳಗಿನ ಜಾವ 6:30 ರ ಸುಮಾರಿಗೆ ಪತ್ರಿ-ಸೇಲು ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಬಸ್‌ನಿಂದ ಬಟ್ಟೆಯಲ್ಲಿ ಸುತ್ತಿ ಏನನ್ನೋ ಕಿಟಕಿಯಿಂದ ಹೊರಗೆ ಎಸೆಯಲ್ಪಟ್ಟಿರುವುದನ್ನು ಗಮನಿಸಿದ ದಾರಿಹೋಕರು ಸಂಶಯಬಂದು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ರಿತಿಕಾ ಧೇರೆ ಎಂದು ಗುರುತಿಸಲಾದ ಮಹಿಳೆ ಸಂತ ಪ್ರಯಾಗ್ ಟ್ರಾವೆಲ್ಸ್ ನಿರ್ವಹಿಸುವ ಸ್ಲೀಪರ್ ಕೋಚ್‌ನಲ್ಲಿ ಪುಣೆಯಿಂದ ಪರ್ಭಾನಿಗೆ ತನ್ನ ಪತಿ ಎಂದು ಹೇಳಿಕೊಳ್ಳುವ ಅಲ್ತಾಫ್ ಶೇಖ್ ನೊಂದಿಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ಸಮಯದಲ್ಲಿ, ಧೇರೆಗೆ ಹೆರಿಗೆ ನೋವು ಕಾಣಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಜನ್ಮನೀಡಿದ ನಂತರ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಬಸ್‌ನಿಂದ ಹೊರಗೆ ಎಸೆದಿದ್ದಾಳೆ. ವಾಹನದಿಂದ ಏನೋ ಎಸೆಯಲ್ಪಟ್ಟಿದ್ದನ್ನು ಕಂಡ ಬಸ್ ಚಾಲಕ ದಂಪತಿಯನ್ನು ಪ್ರಶ್ನಿಸಿದರು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ರಿತಿಕಾ ವಾಂತಿ ಮಾಡುತ್ತಿದ್ದಳು, ಪ್ರಯಾಣದ ವೇಳೆ ತನ್ನ ಪತ್ನಿ ವಾಂತಿ ಮಾಡುತ್ತಾಳೆ ಎಂದು ಚಾಲಕನಿಗೆ ಪತಿ ಹೇಳಿದ್ದಾನೆಂದು ವರದಿಯಾಗಿದೆ.
ಈ ಮಧ್ಯೆ, ಬಸ್ ನಿಂದ ಹೊರಗೆ ಎಸೆದ ಬಂಡಲ್ ನ್ನು ಪರಿಶೀಲಿಸಿದನಾಗರಿಕರೊಬ್ಬರಿಗೆ ನವಜಾತ ಶಿಶು ಪತ್ತೆಯಾಗಿದೆ. ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡವು ಬಸ್ ನ್ನು ತಡೆದು, ಆರಂಭಿಕ ತನಿಖೆಯ ನಂತರ, ಧೇರೆ ಮತ್ತು ಶೇಖ್ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿತು. ವಿಚಾರಣೆಯ ಸಮಯದಲ್ಲಿ, ದಂಪತಿ ಮಗುವನ್ನು ಬೆಳೆಸಲು ಸಾಧ್ಯವಾಗದ ಕಾರಣ ಮಗುವನ್ನು ಎಸೆದಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಶಿಶು ರಸ್ತೆಗೆ ಎಸೆದ ಕಾರಣ ಗಾಯಗೊಂಡು ಮೃತಪಟ್ಟಿದೆ.
ಧೇರೆ ಮತ್ತು ಶೇಖ್ ಇಬ್ಬರೂ ಪರ್ಭಾನಿಯವರಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಪುಣೆಯಲ್ಲಿ ವಾಸಿಸುತ್ತಿದ್ದರು. ಅವರು ವಿವಾಹಿತರು ಎಂದು ಹೇಳಿಕೊಂಡರೂ, ಅವರ ಸಂಬಂಧವನ್ನು ದೃಢೀಕರಿಸಲು ಯಾವುದೇ ದಾಖಲೆಗಳನ್ನು ನೀಡಲಿಲ್ಲ. ನಂತರ ಧೇರೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಭಾರತೀಯ ನ್ಯಾಯ ಸಂಹಿತಾ (ಮೃತ ದೇಹವನ್ನು ರಹಸ್ಯವಾಗಿ ವಿಲೇವಾರಿ ಮಾಡುವ ಮೂಲಕ ಜನನವನ್ನು ಮರೆಮಾಚುವುದು) ಸೆಕ್ಷನ್ 94(3) ಮತ್ತು 94(5) ಅಡಿಯಲ್ಲಿ ಪತ್ರಿ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗೆ ನೋಟಿಸ್ ನೀಡಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement