
ನವದೆಹಲಿ: ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಪದಚ್ಯುತಿಗೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಒಪ್ಪಿಗೆ ನೀಡಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶುಕ್ರವಾರ ಹೇಳಿದ್ದಾರೆ.
"ನಾನು ವಿವಿಧ ರಾಜಕೀಯ ಪಕ್ಷಗಳ ಎಲ್ಲಾ ಹಿರಿಯ ನಾಯಕರೊಂದಿಗೆ ಮಾತನಾಡಿದ್ದೇನೆ. ನಾನು ಎಲ್ಲಾ ಸದಸ್ಯರ ಅಭಿಪ್ರಾಯ ಪಡೆಯಲು ಬಯಸಿದ್ದು, ಕೆಲವು ಏಕ-ಸಂಸದ ಪಕ್ಷಗಳೊಂದಿಗೂ ಸಂಪರ್ಕ ಸಾಧಿಸುತ್ತೇನೆ. ಆದ್ದರಿಂದ ಇದು ಭಾರತ ಸಂಸತ್ತಿನ ಏಕೀಕೃತ ನಿಲುವಾಗುತ್ತದೆ" ಎಂದು ಕಿರಣ್ ರಿಜಿಜು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸರ್ಕಾರ ಮಾತ್ರವಲ್ಲ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಮತ್ತು ಸಂಸದರು ಸಹ ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸುವ ನಿರ್ಣಯ ಮಂಡಿಸುವ ಪರವಾಗಿದ್ದಾರೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ.
"ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಷಯವಾಗಿದೆ. ಏಕೆಂದರೆ ನ್ಯಾಯಾಂಗವು ಜನರಿಗೆ ನ್ಯಾಯ ಸಿಗುವ ಸ್ಥಳವಾಗಿದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರವಿದ್ದರೆ, ಅದು ಎಲ್ಲರಿಗೂ ಗಂಭೀರ ಕಳವಳ. ಅದಕ್ಕಾಗಿಯೇ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸುವ ನಿರ್ಣಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಸಹಿ ಹಾಕಬೇಕು" ಎಂದು ಅವರು ಹೇಳಿದರು.
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಈ ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡಿದೆ ಮತ್ತು ಈ ವಿಷಯದ ಬಗ್ಗೆ ಸಹಮತ ವ್ಯಕ್ತಪಡಿಸಿದೆ ಎಂದು ರಿಜಿಜು ತಿಳಿಸಿದರು.
"ಯಾವುದೇ ಪಕ್ಷವು ಭ್ರಷ್ಟ ನ್ಯಾಯಾಧೀಶರ ಪರವಾಗಿ ನಿಲ್ಲುವುದಿಲ್ಲ ಅಥವಾ ಭ್ರಷ್ಟ ನ್ಯಾಯಾಧೀಶರನ್ನು ರಕ್ಷಿಸುತ್ತದೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಅವರು ಹೇಳಿದ್ದಾರೆ.
ಕಳೆದ ಏಪ್ರಿಲ್ 8 ರ ರಾತ್ರಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಗಣನೀಯ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳ ನಂತರ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ನೀಡುವ ಆಯ್ಕೆಯನ್ನು ಅವರಿಗೆ ಸುಪ್ರೀಂ ಕೋರ್ಟ್ ನೀಡಿತ್ತು. ಆದರೆ ಅವರು ರಾಜೀನಾಮೆ ನೀಡಿಲ್ಲ. ಹೀಗಾಗಿ ಅವರ ಪದಚ್ಯುತಿಗೆ ಕೇಂದ್ರ ಸರ್ಕಾರ ಮಹಾಭಿಯೋಗ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ.
Advertisement