
ರಾಯ್‌ಪುರ: ಮದ್ಯ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ರಾಯ್‌ಪುರ ನ್ಯಾಯಾಲಯ 5 ದಿನ ಇಡಿ ಕಸ್ಟಡಿಗೆ ನೀಡಿ ಶುಕ್ರವಾರ ಆದೇಶಿಸಿದೆ.
ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಭೂಪೇಶ್ ಬಘೇಲ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ಬೆನ್ನಲ್ಲೇ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಬಂಧಿಸಿತ್ತು.
ಬಳಿಕ ಇಡಿ ಅಧಿಕಾರಿಗಳು ಚೈತನ್ಯ ಬಘೇಲ್ ಅವರನ್ನು ರಾಯ್‌ಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಐದು ದಿನ ಇಡಿ ವಶಕ್ಕೆ ನೀಡಿದೆ.
ದುರ್ಗ್ ಜಿಲ್ಲೆಯ ಭಿಲಾಯಿ ಪಟ್ಟಣದಲ್ಲಿರುವ ಬಘೇಲ್ ಮನೆ ಮೇಲೆ ಇಡಿ ದಾಳಿ ನಡೆಸಿದ ವೇಳೆ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಹೊಸ ಪುರಾವೆಗಳು ದೊರೆತ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಮಾಜಿ ಸಿಎಂ ಪುತ್ರನನ್ನು ವಶಕ್ಕೆ ಪಡೆಯಲಾಗಿದೆ.
2019 ಮತ್ತು 2022 ರ ನಡುವೆ ಛತ್ತೀಸ್‌ಗಢದಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಅಕ್ರಮ ನಡೆದಿದ್ದು, ತನಿಖೆಯ ಭಾಗವಾಗಿ ವಿವಿಧ ಆರೋಪಿಗಳಿಂದ ಸುಮಾರು 205 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
Advertisement