
ಲಖನೌ: ಕನ್ವಾರ್ ಯಾತ್ರಿಕರ ಮಾನಹಾನಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ವಾರ್ ಯಾತ್ರಿಗಳನ್ನು ಮಾಧ್ಯಮಗಳ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಭಯೋತ್ಪಾದಕರು ಮತ್ತು ದಂಗೆಕೋರರು ಎಂದು ಚಿತ್ರೀಕರಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ. ಇದು ಭಾರತದ ಪರಂಪರೆಯನ್ನು ಅವಮಾನಿಸುವ ಮನಸ್ಥಿತಿಯಿಂದ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.
ಬುಡಕಟ್ಟು ಐಕಾನ್ ಬಿರ್ಸಾ ಮುಂಡಾ ಅವರ ಕುರಿತಾದ ವಿಚಾರ ಸಂಕಿರಣದಲ್ಲಿ ಶಿವ ಭಕ್ತರನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕನ್ವರ್ 'ಯಾತ್ರಿ'ಗಳನ್ನು ಮಾನಹಾನಿ ಮಾಡಲು ಪ್ರಯತ್ನಿಸುವವರೇ ಬುಡಕಟ್ಟು ಸಮುದಾಯವನ್ನು ಭಾರತದಿಂದ ಬೇರ್ಪಡಿಸಲು ಪ್ರಯತ್ನಿಸಿದ ಜನರಾಗಿದ್ದಾರೆ ಎಂದು ಹೇಳಿದ್ದಾರೆ.
"ಅವರು ಭಾರತದ ವಿರುದ್ಧ ಹೋರಾಡುವಂತೆ ಮಾಡಲು ಎಲ್ಲಾ ಹಂತಗಳಲ್ಲಿಯೂ ಪಿತೂರಿ ನಡೆಸಲಾಯಿತು. ಭಾರತದ ನಂಬಿಕೆಯನ್ನು ಯಾವಾಗಲೂ ಅವಮಾನಿಸುವ ಅದೇ ಸಮುದಾಯ ಇದು ಮತ್ತು ಇಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಖಾತೆಗಳನ್ನು ರಚಿಸುವ ಮೂಲಕ ಜಾತಿ ಸಂಘರ್ಷದ ಪರಿಸ್ಥಿತಿಯನ್ನು ಸೃಷ್ಟಿಸಲು ಬಯಸುವ ಜನರು ಇದೇ ಜನರು" ಎಂದು ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ಸಮಾಜದಿಂದ, ಕಾರ್ಮಿಕ ವರ್ಗಗಳಿಂದ ಮೇಲ್ವರ್ಗದವರೆಗೆ ಎಲ್ಲರೂ ಕನ್ವಾರ್ ಯಾತ್ರೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ತಿಳಿಸಿದ್ದಾರೆ.
"ಅಲ್ಲಿ ಅದ್ಭುತವಾದ ಏಕತೆಯ ಸಂಗಮವಿದೆ. ಯಾವುದೇ ತಾರತಮ್ಯವಿಲ್ಲ. ಜಾತಿಯ ಬೇಧವಿಲ್ಲ, ಪ್ರದೇಶದ ಬೇಧವಿಲ್ಲ, ವರ್ಗದ ಬೇಧವಿಲ್ಲ, ಅಭಿಪ್ರಾಯದ ಬೇಧವಿಲ್ಲ, ಪಂಥದ ಬೇಧವಿಲ್ಲ, ಅವರು 'ಹರ್ ಹರ್ ಬಮ್ ಬಮ್' ಎಂದು ಜಪಿಸುತ್ತಾ ಹೋಗುತ್ತಾರೆ. ಅವರು 300-400 ಕಿಲೋಮೀಟರ್ ನಡೆದು, ನಂತರ ಅಲ್ಲಿಂದ ನೀರನ್ನು ತೆಗೆದುಕೊಂಡು, ಕನ್ವಾರ್ ನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಅದೇ ಭಕ್ತಿಯಿಂದ ಹಿಂತಿರುಗುತ್ತಾರೆ" ಎಂದು ಆದಿತ್ಯನಾಥ್ ಹೇಳಿದ್ದಾರೆ.
Advertisement