
ಶ್ರೀನಗರ: ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಕಾಶ್ಮೀರದ ಕರಕುಶಲ ಕ್ಷೇತ್ರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ. 309.62 ಕೋಟಿ ಮೌಲ್ಯದ ಕೈಯಿಂದ ತಯಾರಿಸಿದ ಕರಕುಶಲ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗಿದೆ.
ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಾಶ್ಮೀರದ ಕೈಯಿಂದ ತಯಾರಿಸಿದ ಕರಕುಶಲ ಉತ್ಪನ್ನಗಳ ರಫ್ತು ಪ್ರಮಾಣ ರೂ. 126.90 ಕೋಟಿ ಆಗಿತ್ತು. ಸದ್ಯದ ಅಂಕಿ ಅಂಶಗಳ ಪ್ರಕಾರ, ಕಾಶ್ಮೀರದ ಕರ ಕುಶಲ ಉತ್ಪನ್ನಗಳ ರಫ್ತುವಿನಲ್ಲಿ ಶೇ. 243 ರಷ್ಟು ಭಾರಿ ಹೆಚ್ಚಳ ಕಂಡುಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ತ್ರೈಮಾಸಿಕದಲ್ಲಿ ಇಷ್ಟೊಂದು ಹೆಚ್ಚಾಗಿರುವುದು ಇದೇ ಮೊದಲು.
ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ.1,500 ಕೋಟಿಗೂ ಹೆಚ್ಚು ಮೌಲ್ಯದ ಕರಕುಶಲ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ. ವಿದೇಶಗಳಿಗೆ ಕರಕುಶಲ ಉತ್ಪನ್ನಗಳ ಹೆಚ್ಚಿನ ರಫ್ತು ಕಾಶ್ಮೀರದ ಪ್ರಸಿದ್ಧ ಕುಶಲಕರ್ಮಿಗಳು ಮತ್ತು ನೇಕಾರರ ಕಲ್ಯಾಣವನ್ನು ಭದ್ರಪಡಿಸುತ್ತದೆ ಎಂದು ಕಾಶ್ಮೀರ ಕರಕುಶಲ ಮತ್ತು ಕೈ ಮಗ್ಗ ಇಲಾಖೆ ವಕ್ತಾರರೊಬ್ಬರು ಹೇಳಿದ್ದಾರೆ.
ಕಳೆದ ವರ್ಷ ವಿವಿಧ ಜಾಗತಿಕ ಬಿಕ್ಕಟ್ಟಿನ ನಡುವೆ ರೂ. 733. 59 ಕೋಟಿ ಮೊತ್ತದ ಕರಕುಶಲ ವಸ್ತುಗಳನ್ನು ರಫ್ತು ಮಾಡಲಾಗಿತ್ತು. ಕಣಿ, ಸೊಜ್ನಿ ಶಾಲುಗಳು ಮತ್ತು ಕಾರ್ಪೆಟ್ ಗಳು ಸೇರಿದಂತೆ ಕ್ರವೆಲ್, ಪೇಪಿಯರ್ ಮ್ಯಾಚೆ, ಚೈನ್ ಸ್ಟಿಚ್ ಮತ್ತು ಮರದಿಂದ ಕೆತ್ತಲಾದ ವಸ್ತುಗಳನ್ನು ಹೆಚ್ಚಾಗಿ ರಫ್ತು ಮಾಡಲಾಗಿತ್ತು. ಸರ್ಕಾರದ ರಫ್ತು ಸಬ್ಸಿಡಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ರಫ್ತುದಾರರಲ್ಲಿ ವಕ್ತಾರರು ಮನವಿ ಮಾಡಿದ್ದಾರೆ.
ಈ ಯೋಜನೆಯಡಿ ಇಲಾಖೆಯಲ್ಲಿ ನೋಂದಾಯಿತ ಅರ್ಹ ರಫ್ತುದಾರರ ಪರವಾಗಿ ಗರಿಷ್ಠ 5 ಕೋಟಿ ರೂ.ವರೆಗೆ ಮರುಪಾವತಿಯೊಂದಿಗೆ ಯಾವುದೇ ದೇಶಕ್ಕೆ ಜಿಐ ನೋಂದಾಯಿತ ಕೈಮಗ್ಗ, ಕರಕುಶಲ ರಫ್ತು ಉತ್ಪನ್ನಗಳ ಒಟ್ಟು ಪರಿಮಾಣದ ಶೇ.10 ರಷ್ಟು ಪ್ರೋತ್ಸಾಹ ಧನವನ್ನು ಒದಗಿಸಲಾಗುತ್ತದೆ.
Advertisement