ಸಂಸತ್ತಿನ ಮುಂಗಾರು ಅಧಿವೇಶನ: ಪಹಲ್ಗಾಮ್ ದಾಳಿ ಸಂಬಂಧ ಸರ್ಕಾರದ ವಿರುದ್ಧ ಮೈತ್ರಿ ರಣತಂತ್ರ; ಇಂಡಿಯಾ ಒಕ್ಕೂಟ ಸಭೆ

ಈ ಪೈಕಿ, ಏರ್‌ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ 23 ಪ್ರಶ್ನೆಗಳು ಹಾಗೂ ರಾಜ್ಯಸಭೆಯಲ್ಲಿ 11 ಪ್ರಶ್ನೆಗಳನ್ನು ಕೇಳಲಾಗುತ್ತದೆ.
File image
ಸಂಗ್ರಹ ಚಿತ್ರ
Updated on

ನವದೆಹಲಿ: ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ ಒಗ್ಗಟ್ಟಿನಿಂದ ಧ್ವನಿ ಎತ್ತಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಸಭೆ ನಡೆಸಿವೆ.

ವರ್ಚುವಲ್‌ ರೂಪದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಆರ್‌ಜೆಡಿ, ಎಸ್‌ಪಿ, ಎನ್‌ಸಿಪಿ-ಎಸ್‌ಪಿ, ಶಿವಸೇನಾ (ಯುಬಿಟಿ), ಜೆಎಂಎಂ, ಸಿಪಿಎಂ, ಸಿಪಿಐ, ಸಿಪಿಐ-ಎಂಎಲ್, ಫಾರ್ವರ್ಡ್ ಬ್ಲಾಕ್, ಐಯುಎಂಎಲ್ ಮತ್ತು ಕೇರಳ ಕಾಂಗ್ರೆಸ್ ಸೇರಿದಂತೆ ಇಪ್ಪತ್ತನಾಲ್ಕು ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ, ಪಹಲ್ಗಾಮ್ ದಾಳಿ ಮತ್ತು ಸಿಂಧೂರ ಕಾರ್ಯಾಚರಣೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ನಾಯಕರು ಚರ್ಚಿಸಿದರು.

ಕಾಂಗ್ರೆಸ್‌, ಬಿಜೆಪಿ, ಟಿಎಂಸಿ, ಡಿಎಂಕೆ, ಜೆಡಿಯು, ಸಿಪಿಎಂ, ಸಿಪಿಐ, ಶಿವಸೇನಾ, ಜನಸೇನಾ ಹಾಗೂ ಎನ್‌ಸಿಪಿ(ಎಸ್‌ಪಿ) ಪಕ್ಷಗಳಿಗೆ ಸೇರಿದ 50 ಸಂಸದರು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಶೂನ್ಯ ವೇಳೆ ವಿವಿಧ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲು ಸಜ್ಜಾಗಿದ್ದಾರೆ. ಈ ಪೈಕಿ, ಏರ್‌ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ 23 ಪ್ರಶ್ನೆಗಳು ಹಾಗೂ ರಾಜ್ಯಸಭೆಯಲ್ಲಿ 11 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆಗೆ ಸಂಬಂಧಿಸಿ ಕನಿಷ್ಠ 7 ಪ್ರಶ್ನೆಗಳಿವೆ. ಆದರೆ, ಜೂನ್‌ 12ರಂದು ಅಹಮದಾಬಾದ್‌ನಲ್ಲಿ ಪತನಗೊಂಡ ಏರ್‌ ಇಂಡಿಯಾ ವಿಮಾನ ಕುರಿತು ಈ ಪ್ರಶ್ನೆಗಳಲ್ಲಿ ನೇರ ಪ್ರಸ್ತಾಪ ಇಲ್ಲ.

File image
ಮುಂಗಾರು ಅಧಿವೇಶನ ಮುನ್ನ ಸರ್ಕಾರದಿಂದ ಸರ್ವಪಕ್ಷ ಸಭೆ; ಬಿಹಾರ SIR, Op Sindoor ಪ್ರತಿಪಕ್ಷಗಳ ಪ್ರಮುಖ ಅಜೆಂಡಾ

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕಾಂಗ್ರೆಸ್‌ ನಾಯಕ ಪ್ರಮೋದ್‌ ತಿವಾರಿ, ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ. ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕೆಂದು ನಮ್ಮ ಅಪೇಕ್ಷೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹಾಜರಿರಬೇಕು. ವಿರೋಧ ಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

ಪಹಲ್ಗಾಮ್ ದಾಳಿ, ಕದನ ವಿರಾಮ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೆ, ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಎಂಟು ಪ್ರಮುಖ ವಿಷಯಗಳನ್ನು ಪ್ರತಿಪಕ್ಷದ ನಾಯಕರು ಸಂಸತ್ತಿನಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಶರದ್ ಪವಾರ್ (ಎನ್‌ಸಿಪಿ–ಎಸ್‌ಪಿ) , ಉದ್ಧವ್ ಠಾಕ್ರೆ (ಶಿವಸೇನಾ-ಯುಬಿಟಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ), ತೇಜಸ್ವಿ ಯಾದವ್ (ಆರ್‌ಜೆಡಿ), ರಾಮ್ ಗೋಪಾಲ್ ಯಾದವ್ (ಎಸ್‌ಪಿ), ತಿರುಚ್ಚಿ ಶಿವ (ಡಿಎಂಕೆ) ಎಂ.ಎ. ಬೇಬಿ, ಡಿ. ರಾಜಾ (ಸಿಪಿಐ), ದೀಪಂಕರ್ ಭಟ್ಟಾಚಾರ್ಯ (ಸಿಪಿಐಎಂಎಲ್) ಮತ್ತಿತರ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com