
ಥಾಣೆ: ಜೈಲಿನಿಂದ ಬಿಡುಗಡೆಯಾದ ಸಮಾಜಘಾತುಕ ಶಕ್ತಿಗಳಿಗೆ ಹಾರ, ತುರಾಯಿ ಹಾಕಿ ಸಂಭ್ರಮಾಚರಣೆ ಮಾಡುವುದು ಸಾಮಾನ್ಯವಾಗಿದೆ.
ಇದೇ ರೀತಿಯಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಡ್ರಗ್ಸ್ ಪ್ರಕರಣದ ಆರೋಪಿ ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189 (ಕಾನೂನುಬಾಹಿರವಾಗಿ ಗುಂಪು ಸೇರುವುದು) ಮತ್ತಿತರ ನಿಬಂಧನೆಗಳು ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಪ್ರಕಾರ ಮೀರಾ-ಭಯಂದರ್ ವಸೈ-ವಿರಾರ್ (ಎಂಬಿವಿವಿ) ಪೊಲೀಸರು ಶನಿವಾರ 45 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
NDPS ಕಾಯ್ದೆಯಡಿ ಬಂಧಿಸಲಾದ ಡ್ರಗ್ ಪೆಡ್ಲರ್ ಕಮ್ರಾನ್ ಮೊಹಮ್ಮದ್ ಖಾನ್ ಜುಲೈ 16 ರಂದು ರಾತ್ರಿ ಥಾಣೆ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದಾಗ ಜೈಲಿನ ಬಳಿ ಸೇರಿದ್ದ ಆತನ ಆಪ್ತರು ಅದ್ದೂರಿ ಸ್ವಾಗತ ಕೋರಿದರು. ಅಲ್ಲಿಂದ ಕಾರುಗಳ ಬೆಂಗಾವಲಿನಲ್ಲಿ ನಯಾನಗರಕ್ಕೆ ಪ್ರಯಾಣಿಸಿದ್ದರು. ಅಲ್ಲಿ ಹೋಟೆಲ್ ಬಳಿ ಜಮಾಯಿಸಿ ಪಟಾಕಿ ಸಿಡಿಸಿ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದರು.
ಜೋರಾದ ಸಂಗೀತದೊಂದಿಗೆ ಸಾರ್ವಜನಿಕರಿಗೆ ಭಯದ ವಾತವಾರಣ ನಿರ್ಮಾಣ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಸಂಬಂಧ 45 ಆರೋಪಿಗಳ ಹೆಸರನ್ನು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಇತರ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement