
ಚಂಡೀಗಢ: ಆಪರೇಷನ್ ಸಿಂಧೂರ್ ಸಮಯದಲ್ಲಿ ಯೋಧರಿಗೆ ಸಹಾಯ ಮಾಡಿದ್ದ 10 ವರ್ಷದ ಬಾಲಕ ಶ್ವಾನ್ ಸಿಂಗ್ ಅವರ ಧೈರ್ಯ ಮತ್ತು ದೃಢಸಂಕಲ್ಪವನ್ನು ಪರಿಗಣಿಸಿ ಭಾರತೀಯ ಸೇನೆಯ ಗೋಲ್ಡನ್ ಆರೋ ವಿಭಾಗ, ಆತನ ಶಿಕ್ಷಣದ ವೆಚ್ಚ ಭರಿಸಲು ನಿರ್ಧರಿಸಿದೆ.
ದೇಶದ ಅತ್ಯಂತ ಕಿರಿಯ ನಾಗರಿಕ ಯೋಧ ಎಂದು ಪ್ರಶಂಸಿಸಲ್ಪಟ್ಟ ಪಂಜಾಬ್ ನ ಫಿರೋಜ್‌ಪುರ ಜಿಲ್ಲೆಯ ಮಾಮ್‌ಡೋಟ್ ಗ್ರಾಮದ IVನೇ ತರಗತಿ ವಿದ್ಯಾರ್ಥಿ ಶ್ವಾನ್, ಆಪರೇಷನ್ ಸಿಂಧೂರ್ ಸಮಯದಲ್ಲಿ ತಾರಾ ವಾಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಮತ್ತು ಸುಡುವ ಬಿಸಿಲಲ್ಲಿ ಸೈನಿಕರಿಗಾಗಿ ತನ್ನ ಮನೆಯಿಂದ ನೀರು, ಹಾಲು, ಲಸ್ಸಿ ಮತ್ತು ಐಸ್ ಅನ್ನು ತರುತ್ತಿದ್ದನು.
ಈ ಶೌರ್ಯಕ್ಕಾಗಿ, ಶ್ವಾನ್ ಸಿಂಗ್ ನನ್ನು ಭಾರತೀಯ ಸೇನೆಯು ಆಪರೇಷನ್ ಸಿಂಧೂರ್‌ನ ಅತ್ಯಂತ ಕಿರಿಯ ನಾಗರಿಕ ಯೋಧ ಎಂದು ಗೌರವಿಸಿದ್ದು, ಆತನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸಲು ನಿರ್ಧರಿಸಿದೆ.
ಶನಿವಾರ ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿ ನಡೆದ ಸಮಾರಂಭದಲ್ಲಿ ಶ್ವಾನ್ ಅವರನ್ನು ಸನ್ಮಾನಿಸಿದ ಪಶ್ಚಿಮ ಕಮಾಂಡ್‌ನ ಜಿಒಸಿ-ಇನ್-ಸಿ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್, "ಶ್ವಾನ್‌ನಲ್ಲಿ, ನಾವು ಧೈರ್ಯವನ್ನು ಮಾತ್ರವಲ್ಲದೆ ಗಮನಾರ್ಹ ಸಾಮರ್ಥ್ಯವನ್ನು ಕಾಣುತ್ತೇವೆ. ಸೈನ್ಯವು ಪ್ರತಿ ಹಂತದಲ್ಲೂ ಆತನೊಂದಿಗೆ ನಿಲ್ಲುತ್ತದೆ ಎಂದರು.
ಪ್ರವೇಶ ಶುಲ್ಕದಿಂದ ಹಿಡಿದು ಆತನ ಶಿಕ್ಷಣದ ಪ್ರತಿಯೊಂದು ವೆಚ್ಚವನ್ನು ನೋಡಿಕೊಳ್ಳಲಾಗುತ್ತದೆ. ಆರ್ಥಿಕ ಮಿತಿಗಳು ಆತನ ಪ್ರಯಾಣಕ್ಕೆ ಎಂದಿಗೂ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ. ಇದು ಬೆಂಬಲಕ್ಕಿಂತ ಹೆಚ್ಚಿನದಾಗಿದೆ. ಇದು ಭರವಸೆ ಮತ್ತು ಉದ್ದೇಶದಿಂದ ತುಂಬಿದ ಭವಿಷ್ಯಕ್ಕೆ ಅಡಿಪಾಯವಾಗಿದೆ'' ಎಂದು ಅವರು ಹೇಳಿದರು.
Advertisement