
ನವದೆಹಲಿ: ಅಂತರ ರಾಜ್ಯ ಬೃಹತ್ ಮತಾಂತರ ಜಾಲ ಪತ್ತೆಯಾದ ಎರಡು ದಿನಗಳ ನಂತರ ಉತ್ತರ ಪ್ರದೇಶ ಪೊಲೀಸರು ಸೋಮವಾರ ಪ್ರಕರಣದ ಕಿಂಗ್ ಪಿನ್ ನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. ಫಿರೋಜ್ ಬಾದ್ ನ ನಿವಾಸಿ ಅಬ್ದುಲ್ ರೆಹಮಾನ್ ಬಂಧಿತ ಪ್ರಮುಖ ಆರೋಪಿಯಾಗಿದ್ದಾನೆ. ಇದರೊಂದಿಗೆ ಈ ಪ್ರಕರಣದಲ್ಲಿ ಇಲ್ಲಿಯವರೆಗೂ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆಹಮಾನ್ ಈ ಗ್ಯಾಂಗ್ ನ ಕಿಂಗ್ ಪಿನ್ ಆಗಿದ್ದಾನೆ. ಈತನನ್ನು ಗ್ಯಾಂಗ್ ಸದಸ್ಯರು ರೆಹಮಾನ್ ಚಾಚಾ ಎಂದು ಕರೆಯುತ್ತಿದ್ದರು ಎಂದು ಆಗ್ರಾ ಪೊಲೀಸ್ ಕಮಿಷನರ್ ದೀಪಕ್ ಕುಮಾರ್ ಹೇಳಿದ್ದಾರೆ.
ಸಿದ್ದಿಕಿ ನಂತರ ಮತಾಂತರದ ಹೊಣೆ ಹೊತ್ತಿದ್ದ ರೆಹಮಾನ್: 1990ರಲ್ಲಿ ತಾನೇ ಸ್ವತ: ಇಸ್ಲಾಂಗೆ ಮತಾಂತರಗೊಂಡಿದ್ದಅಬ್ದುಲ್ ರೆಹಮಾನ್, ತದನಂತರ ದೆಹಲಿಗೆ ಹೋಗಿದ್ದರು.ಅದಕ್ಕೂ ಮುನ್ನಾ ಕಲೀಂ ಸಿದ್ದಿಕಿ ಈ ಮತಾಂತರ ಜಾಲದ ಕಿಂಗ್ ಪಿನ್ ಆಗಿದ್ದರು. ಆದರೆ 2021ರಲ್ಲಿ ಉತ್ತರ ಪ್ರದೇಶದ STF ಪೊಲೀಸರು ಸಿದ್ದಿಕಿಯನ್ನು ಬಂಧಿಸಿದ್ದರು.
2024ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಆಗಿತ್ತು. ತದನಂತರ ರೆಹಮಾನ್ ಮತಾಂತರ ಜಾಲದ ಕಿಂಗ್ ಪಿನ್ ಆಗಿದ್ದರು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ರೆಹಮಾನ್‌ನಿಂದ ಹಲವು ಧಾರ್ಮಿಕ ಸಾಹಿತ್ಯದ ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತನನ್ನು ವಶಕ್ಕೆ ಪಡೆದ ನಂತರ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ? ಜುಲೈ 19 ರಂದು ಮತಾಂತರ ದಂಧೆಯನ್ನು ಭೇದಿಸಿದ್ದ ಉತ್ತರ ಪ್ರದೇಶ ಪೊಲೀಸರು ಆರು ರಾಜ್ಯಗಳ 10 ಜನರನ್ನು ಬಂಧಿಸಿದ್ದರು. 33 ಮತ್ತು 18 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಕಾಣೆಯಾದ ನಂತರ ಮಾರ್ಚ್‌ನಲ್ಲಿ ಆಗ್ರಾದಲ್ಲಿ ಈ ವಿಷಯದ ತನಿಖೆ ಪ್ರಾರಂಭವಾಯಿತು. ಅವರಿಗೆ ಆಮಿಷವೊಡ್ಡುವ ಮೂಲಕ ಮತಾಂತರಗೊಳಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬ ಸಹೋದರಿಯು ಎಕೆ-47 ರೈಫಲ್ ಹಿಡಿದಿರುವ ಹುಡುಗಿಯ ಫೋಟೋವೊಂದನ್ನು ತನ್ನ ಫೇಸ್ ಬುಕ್ ಪ್ರೊಫೆಲ್ ಗೆ ಹಾಕಿದ್ದರು. ಲವ್ ಜಿಹಾದ್ ನಲ್ಲಿ ತೊಡಗಿರುವ ಗ್ಯಾಂಗ್ ಸಹೋದರಿಯರನ್ನು ಟಾರ್ಗೆಟ್ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮತಾಂತರ ಜಾಲಕ್ಕೆ ಅಮೆರಿಕ, ಕೆನಡಾದಿಂದ ಹಣದ ಪಾವತಿಯಾಗಿದೆ ಎಂದು ಕುಮಾರ್ ಶನಿವಾರ ಹೇಳಿದ್ದರು.
ಇದುವರೆಗೂ 11 ಆರೋಪಿಗಳ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ರಾ ಪೊಲೀಸರು ಇದುವರೆಗೆ 11 ಮಂದಿಯನ್ನು ಬಂಧಿಸಿದ್ದಾರೆ. ರಾಜಸ್ಥಾನದಿಂದ ಮೂವರು, ಯುಪಿ, ಪಶ್ಚಿಮ ಬಂಗಾಳ ಮತ್ತು ದೆಹಲಿಯಿಂದ ತಲಾ ಇಬ್ಬರು ಮತ್ತು ಗೋವಾ ಮತ್ತು ಉತ್ತರಾಖಂಡದಿಂದ ಒಬ್ಬರನ್ನು ಬಂಧಿಸಲಾಗಿದೆ. ಐಸಿಸ್ ಉಗ್ರ ಸಂಘಟನೆ ಮಾದರಿಯಲ್ಲಿ ಮತಾಂತರ ಮಾಡಲಾಗುತಿತ್ತು ಎಂದು ಕುಮಾರ್ ವಿವರಿಸಿದ್ದಾರೆ.
Advertisement