
ಮಲಪ್ಪುರಂ: ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ದೋಹಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಟೇಕ್ ಆಫ್ ಆದ ಎರಡು ಗಂಟೆಗಳ ನಂತರ ತಾಂತ್ರಿಕ ದೋಷದಿಂದಾಗಿ ವಾಪಸ್ ಬಂದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಪೈಲಟ್‌ಗಳು ಮತ್ತು ಸಿಬ್ಬಂದಿ ಸೇರಿದಂತೆ 188 ಜನರನ್ನು ಹೊತ್ತ ವಿಮಾನ IX 375 ಕ್ಯಾಲಿಕಟ್‌ನಿಂದ ಇಂದು ಬೆಳಗ್ಗೆ 9.07 ರ ಸುಮಾರಿಗೆ ಟೇಕ್ಆಪ್ ಆಗಿತ್ತು. ಆದರೆ ಎರಡು ಗಂಟೆಗಳ ನಂತರ ಬೆಳಗ್ಗೆ 11.12 ಕ್ಕೆ ಅದೇ ವಿಮಾನ ನಿಲ್ದಾಣಕ್ಕೆ ಮರಳಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ವಿಮಾನದ ಕ್ಯಾಬಿನ್ ಎಸಿಯಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಇತ್ತು. ಅದು ತುರ್ತು ಲ್ಯಾಂಡಿಂಗ್ ಅಲ್ಲ" ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಮತ್ತು ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗುವುದು ಅಥವಾ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪುನರಾರಂಭಿಸಲು ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ತಾಂತ್ರಿಕ ದೋಷದ ದೃಷ್ಟಿಯಿಂದ ಇದು "ಮುನ್ನೆಚ್ಚರಿಕೆ ಲ್ಯಾಂಡಿಂಗ್" ಆಗಿದ್ದು, ಮಧ್ಯಾಹ್ನ 1.30 ರ ವೇಳೆಗೆ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗುವುದು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.
"ಅಲ್ಲಿಯವರೆಗೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಹಾರ ಮತ್ತು ನೀರಿನಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ" ಎಂದು ಅವರು ಹೇಳಿದ್ದಾರೆ.
Advertisement