ಪ್ರತಿಪಕ್ಷಗಳಿಂದ ಪ್ರತಿಭಟನೆ: ಮೂರನೇ ದಿನವೂ ಸಂಸತ್ ಕಲಾಪ ಮುಂದೂಡಿಕೆ

ಪ್ರತಿಭಟನಾ ನಿರತ ಸಂಸದರು ಬೀದಿಗಳಲ್ಲಿ ವರ್ತಿಸಿದಂತೆ ಸದನದಲ್ಲಿ ವರ್ತಿಸುತ್ತಿದ್ದಾರೆ ಎಂದು ಸ್ಪೀಕರ್ ಓಂ ಬಿರ್ಲಾ ಕಿಡಿ ಕಾರಿದರು.
Loksabha
ಲೋಕಸಭೆ
Updated on

ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(SIR)ಮತ್ತು ಆಪರೇಷನ್ ಸಿಂಧೂರ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುತ್ತಲೇ ಇದ್ದುದರಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಬುಧವಾರ ಸತತ ಮೂರನೇ ದಿನವೂ ಮುಂದೂಡಲಾಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ, ವಿರೋಧ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಇದಕ್ಕೂ ಮೊದಲು ಮಧ್ಯಾಹ್ನ 2 ಗಂಟೆಯವರೆಗೆ ಕಲಾಪ ಮುಂದೂಡಲಾಯಿತು. ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ಘೋಷಣೆ ಕೂಗುವುದನ್ನು ಮುಂದುವರೆಸಿದವು. ಹೀಗಾಗಿ ಸ್ಪೀಕರ್ ಕಲಾಪವನ್ನು ಮುಂದೂಡಿದರು.

ವಿರೋಧ ಪಕ್ಷದ ಸದಸ್ಯರು "SIR WAPAS LO(Roll Back SIR)" ಎಂದು ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾ ನಿರತ ಸಂಸದರು ಬೀದಿಗಳಲ್ಲಿ ವರ್ತಿಸಿದಂತೆ ಸದನದಲ್ಲಿ ವರ್ತಿಸುತ್ತಿದ್ದಾರೆ ಎಂದು ಸ್ಪೀಕರ್ ಓಂ ಬಿರ್ಲಾ ಕಿಡಿ ಕಾರಿದರು ಮತ್ತು ಅವರ ವಿರುದ್ಧ "ಕಠಿಣ" ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Loksabha
Watch | 'ಏನೋ ಅನುಮಾನಾಸ್ಪ ಅಂಶವಿದೆ': ಧನ್ಕರ್ ರಾಜೀನಾಮೆ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಲಿ

"ನಿಮ್ಮನ್ನು ಆಯ್ಕೆ ಮಾಡಿದ ಜನರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನೀವು ವರ್ತಿಸಬೇಕು. ಜನರ ಜೀವನವನ್ನು ಸುಲಭಗೊಳಿಸುವ ವಿಷಯಗಳ ಕುರಿತು ಚರ್ಚೆ ನಡೆಸಬೇಕು. ಆದರೆ ನೀವು ಸಂಸತ್ತಿನಲ್ಲೂ ಬೀದಿಯಲ್ಲಿ ವರ್ತಿಸುವಂತೆ ವರ್ತಿಸುತ್ತಿದ್ದೀರಿ" ಎಂದು ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಮೇಲ್ಮನೆಯಲ್ಲೂ ಇದೇ ರೀತಿಯ ದೃಶ್ಯಗಳು ಕಂಡುಬಂದವು. ಹೀಗಾಗಿ ರಾಜ್ಯಸಭಾ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ನಂತರ ಮಧ್ಯಾಹ್ನ 2 ಗಂಟೆಗೆ ದಿನದ ಎಲ್ಲಾ ಕಲಾಪಗಳನ್ನು ಸ್ಥಗಿತಗೊಳಿಸಿ ನಾಳೆಗೆ ಮುಂದೂಡಲಾಯಿತು.

ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಕುರಿತು ಉಭಯ ಸದನಗಳಲ್ಲಿ ಚರ್ಚಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪ್ರತಿಪಕ್ಷಗಳು ಪ್ರತಿಭಟಿಸುತ್ತಿವೆ.

ಪ್ರತಿಪಕ್ಷಗಳ ಬೇಡಿಕೆಯನ್ನು ಪರಿಗಣಿಸುತ್ತಿಲ್ಲ. ಇದರಿಂದ ಕಲಾಪಕ್ಕೆ ಅಡ್ಡಿಯಾಗುತ್ತಿದೆ. ಕಲಾಪಕ್ಕೆ ಅಡ್ಡಿಯಾದರೆ, ಅದರ ಅತಿದೊಡ್ಡ ಫಲಾನುಭವಿ ಸರ್ಕಾರ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದ ಡೆರೆಕ್ ಒ ಬ್ರಿಯಾನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com