
ನವದೆಹಲಿ: ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಆಯೋಗವು ಮತ ವಂಚನೆಗೆ ಅವಕಾಶ ನೀಡಿದೆ ಎಂಬುದಕ್ಕೆ ತಮ್ಮ ಬಳಿ "ಶೇಕಡಾ 100 ರಷ್ಟು ದೃಢವಾದ ಪುರಾವೆ" ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಚುನಾವಣಾ ಆಯೋಗವು ಭಾರತದ ಚುನಾವಣಾ ಆಯೋಗವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದು ಕೇಂದ್ರ ಸರ್ಕಾರದ ಆಯೋಗವಾಗಿ ಕಾರ್ಯನಿರ್ವಹಿಸುತ್ತಿದೆ. ನಾನು ಚುನಾವಣಾ ಆಯೋಗಕ್ಕೆ ಒಂದು ಸಂದೇಶ ಕಳುಹಿಸಲು ಬಯಸುತ್ತೇನೆ. ನೀವು ಇದರಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದು ರಾಹಲ್ ಗಾಂಧಿ ಹೇಳಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಮತ್ತು ಬಿಹಾರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿರುವ RJD ನಾಯಕ ತೇಜಸ್ವಿ ಯಾದವ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕರ್ನಾಟಕದ ಒಂದು ಸ್ಥಾನದಲ್ಲಿ ಚುನಾವಣಾ ಆಯೋಗವು ವಂಚನೆಗೆ ಅವಕಾಶ ನೀಡಿದೆ ಎಂಬುದಕ್ಕೆ ತಮ್ಮ ಪಕ್ಷವು "ಶೇಕಡಾ 100 ರಷ್ಟು ದೃಢವಾದ ಪುರಾವೆ" ಹೊಂದಿದೆ ಎಂದು ತಿಳಿಸಿದರು.
"ಶೇಕಡಾ 90 ಅಲ್ಲ, ನಾವು ಅದನ್ನು ನಿಮಗೆ ತೋರಿಸಲು ನಿರ್ಧರಿಸಿದಾಗ, ಅದು 100 ರಷ್ಟು ದೃಢವಾದ ಪುರಾವೆಯಾಗಿದೆ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.
"ನಾವು ಒಂದು ಕ್ಷೇತ್ರದಲ್ಲಿ ಪರಿಶೀಲನೆ ನಡೆಸಿದಾಗ ಇದು ನಮ್ಮ ಗಮನಕ್ಕೆ ಬಂದಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಇದೇ ಡ್ರಾಮಾ ನಡೆಯುತ್ತಿದೆ ಎಂದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಸಾವಿರಾರು ಹೊಸ ಮತದಾರರು, ಅವರ ವಯಸ್ಸು ಎಷ್ಟು? - ಒಂದು ಕ್ಷೇತ್ರದಲ್ಲಿ 45, 50, 60, 65 ವರ್ಷ ಎಂದು ಹೇಳಿಕೊಂಡು ಸಾವಿರಾರ ಸೇರ್ಪಡೆಯಾಗಿದೆ. ಇದು ಒಂದು ವಿಷಯವಾದರೆ, ಮತದಾರರ ಅಳಿಸುವಿಕೆ, ಅಕ್ರಮವಾಗಿ 18 ವರ್ಷಕ್ಕಿಂತ ಮೇಲ್ಪಟ್ಟ ಹೊಸ ಮತದಾರರ ಸೇರ್ಪಡೆಯನ್ನು ಪತ್ತೆ ಮಾಡಿದ್ದೇವೆ" ಎಂದು ಅವರು ತಿಳಿಸಿದರು.
"ನಾನು ಚುನಾವಣಾ ಆಯೋಗಕ್ಕೆ ಒಂದು ಸಂದೇಶ ಕಳುಹಿಸಲು ಬಯಸುತ್ತೇನೆ - ನೀವು ಇದರಿಂದ ತಪ್ಪಿಸಿಕೊಳ್ಳುತ್ತೀರಿ ಎಂದು ಭಾವಿಸಿದರೆ ಅದು ಸಾಧ್ಯವಿಲ್ಲ. ಏಕೆಂದರೆ ನೀವು ತಪ್ಪು ಮಾಡಿದ್ದೀರಿ. ನಾವು ಆ ತಪ್ಪಿನ ಕುರಿತಾದ ಪುರಾವೆಯೊಂದಿಗೆ ನಿಮ್ಮ ಬಳಿಗೆ ಬರುತ್ತೇವೆ" ಎಂದು ರಾಹುಲ್ ಗಾಂಧಿ ಸಂಸತ್ತಿನ ಆವರಣದಲ್ಲಿ ವರದಿಗಾರರಿಗೆ ತಿಳಿಸಿದರು.
Advertisement