
ನವದೆಹಲಿ: ಜಗದೀಪ್ ಧಂಖರ್ ಅವರ ಹಠಾತ್ ರಾಜೀನಾಮೆಯನ್ನು ಕಾಂಗ್ರೆಸ್ ಪ್ರಶ್ನಿಸುತ್ತಲೇ ಇದ್ದರೂ, ಈ ಮಧ್ಯೆ ಅವರಿಗೆ ಗೌರವಯುತ ವಿದಾಯ ಸಮಾರಂಭಕ್ಕೆ ಒತ್ತಾಯಿಸಿದೆ. ಆದರೆ ಕೇಂದ್ರ ಸರ್ಕಾರ ಮೌನಕ್ಕೆ ಶರಣಾಗಿದೆ. ಧಂಖರ್ ಅವರ ನಿರ್ಗಮನದ ಬಗ್ಗೆ ಹೆಚ್ಚುತ್ತಿರುವ ರಾಜಕೀಯ ಗದ್ದಲದ ಮಧ್ಯೆ ಈ ಒತ್ತಾಯ ಕೇಳಿಬಂದಿದೆ. ಧಂಖರ್ ಅವರು ಆರೋಗ್ಯ ಕಾರಣಗಳಿಂದಾಗಿ ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ವಿರೋಧ ಪಕ್ಷದ ನಾಯಕರು ಸರ್ಕಾರದಿಂದ ಸ್ಪಷ್ಟನೆಗಾಗಿ ಒತ್ತಾಯಿಸುತ್ತಲೇ ಇವೆ.
ಬುಧವಾರ ಸಂಜೆ ನಡೆದ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಈ ಬೇಡಿಕೆಯನ್ನು ಎತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಕಿರಣ್ ರಿಜಿಜು ಯಾವುದೇ ಸ್ಪಂದನೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಮೂರು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಧಂಖರ್ ಅವರಿಗೆ "ಗೌರವಯುತ ವಿದಾಯ" ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಧಂಖರ್ ಅವರ ಹಠಾತ್ ರಾಜೀನಾಮೆಯ ಬಗ್ಗೆ ವಿರೋಧ ಪಕ್ಷವು ಸರ್ಕಾರವನ್ನು ಪ್ರಶ್ನಿಸುತ್ತಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ವಿರೋಧ ಪಕ್ಷದ ಸಂಸದರು ಸಹಿ ಮಾಡಿದ ನೋಟಿಸ್ ಅನ್ನು ಧಂಖರ್ ಸ್ವೀಕರಿಸಿದ ನಂತರ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕೆಲವು ತಿಂಗಳ ಹಿಂದೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಸುಟ್ಟುಹೋದ ಕರೆನ್ಸಿ ನೋಟುಗಳ ರಾಶಿಯನ್ನು ವಶಪಡಿಸಿಕೊಳ್ಳಲಾಗಿತ್ತು.
ರಾಜ್ಯಸಭೆಯು ತನ್ನ ಆರು ಸದಸ್ಯರಿಗೆ ವಿದಾಯ ಹೇಳುತ್ತಿರುವ ಸಮಯದಲ್ಲಿ ಈ ಬೇಡಿಕೆಯನ್ನು ಎತ್ತಲಾಯಿತು. ಅಂಬುಮಣಿ ರಾಮದಾಸ್, ವೈಕೊ, ಪಿ ವಿಲ್ಸನ್, ಎಂ ಷಣ್ಮುಗಂ, ಎಂ ಮೊಹಮ್ಮದ್ ಅಬ್ದುಲ್ಲಾ ಮತ್ತು ಎನ್ ಚಂದ್ರಶೇಖರನ್ ಅವರಿಗೆ ವಿದಾಯ ಹೇಳಲಾಗುತ್ತಿದೆ.
ಜಗದೀಪ್ ಧಂಖರ್ ಕಳೆದ ಸೋಮವಾರ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ್ದು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿದ್ದರು. ಆದರೆ ಅವರ ಅವಧಿ 2027ರ ಆಗಸ್ಟ್ 10ಕ್ಕೆ ಕೊನೆಗೊಳ್ಳಬೇಕಿತ್ತು. ಧಂಖರ್ ಅವರ ರಾಜೀನಾಮೆಯ ಹಿಂದಿನ ಕಾರಣಗಳ ಬಗ್ಗೆ ವಿವಿಧ ಕಾರಣಗಳು ವ್ಯಕ್ತವಾಗುತ್ತಿವೆ. ಇಬ್ಬರು ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಜಗದೀಪ್ ಧಂಖರ್ ಮತ್ತು ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ. ಧಂಖರ್ ಅವರ ನಿರ್ಧಾರಕ್ಕೆ ನಿಖರವಾದ ಕಾರಣಗಳು ಸ್ಪಷ್ಟವಾಗಿಲ್ಲವಾದರೂ, ಉಪರಾಷ್ಟ್ರಪತಿ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳಾಗಿ ಹಲವಾರು ಹೆಸರುಗಳು ಈಗಾಗಲೇ ಸುತ್ತುತ್ತಿವೆ.
TNIE ಜೊತೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಕೆಲ NDA ಸಂಸದರು, ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಎನ್ ಡಿಎ ಮೈತ್ರಿಕೂಟವು ಹಿಂದುಳಿದ ಸಮುದಾಯದ ಅಭ್ಯರ್ಥಿಯ ಕಡೆಗೆ ಒಲವು ತೋರುತ್ತಿದೆ ಎಂದು ದೃಢಪಡಿಸಿದರು. ಪ್ರಸ್ತುತ ಕೃಷಿ ರಾಜ್ಯ ಸಚಿವ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ಮುಂಚೂಣಿಯಲ್ಲಿದ್ದಾರೆ.
Advertisement