
ಪಾಟ್ನಾ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಯನ್ನು ಖಂಡಿಸಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದು ನಮ್ಮ ಮುಂದಿನ ಆಯ್ಕೆಯಾಗಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಗುರುವಾರ ಹೇಳಿದ್ದಾರೆ.
ಮಳೆಗಾಲದ ಅಧಿವೇಶನದ ಕೊನೆಯ ದಿನದಂದು ರಾಜ್ಯ ವಿಧಾನಸಭೆಯ ಹೊರಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು, ಚುನಾವಣಾ ಆಯೋಗವು ಸರ್ಕಾರದ "ರಾಜಕೀಯ ಸಾಧನ" ವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿಯೇ ಪ್ರತಿಪಕ್ಷವನ್ನು, ವಿಶೇಷವಾಗಿ ರಾಷ್ಟ್ರೀಯ ಜನತಾ ದಳವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಆರ್ ಜೆಡಿ ಮತದಾರರ ಹೆಸರುಗಳನ್ನು ಪರಿಷ್ಕರಣೆಯ ನೆಪದಲ್ಲಿ ತೆಗೆದು ಹಾಕಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ವಿಶೇಷ ಸಮಗ್ರ ಮತ ಪರಿಷ್ಕರಣೆ ಅನ್ನೋದು ಪಿತೂರಿ. ಸಾಂಪ್ರದಾಯಿಕ ರಾಷ್ಟ್ರೀಯ ಜನತಾ ದಳದ ಮತದಾರರ ಹೆಸರುಗಳನ್ನು ಪರಿಷ್ಕರಣೆಯ ನೆಪದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಹೀಗೆ ಮಾಡುವ ಮೂಲಕ ಭಾರತೀಯ ಚುನಾವಣಾ ಆಯೋಗವು ಆಡಳಿತಾರೂಢ ಪಕ್ಷದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಅಧಿವೇಶನದಲ್ಲಿಯೂ ಚರ್ಚಿಸಲಾಗಿದೆ. ನಮ್ಮ ಮತದಾರರನ್ನು ಗುರಿಯಾಗಿಸಿಕೊಂಡು ಆಯೋಗವು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದ್ದು, ಇದನ್ನೆಲ್ಲ ನೋಡಿದರೆ ಚುನಾವಣೆ ನಡೆಸುವುದೇ ಅರ್ಥಹೀನ ಎಂದು ಅನ್ನಿಸುತ್ತದೆ ಎಂದು ತೇಜಸ್ವಿ ಯಾದವ್ ಕಳವಳ ವ್ಯಕ್ತಪಡಿಸಿದ್ದಾರೆ.
Advertisement