
ಜಲವಾರ್: ಇಂದು ಶುಕ್ರವಾರ ಬೆಳಗ್ಗೆ ರಾಜಸ್ಥಾನದ ಜಲವಾರ್ ಜಿಲ್ಲೆಯ ಮನೋಹರ್ಥನಾ ಬ್ಲಾಕ್‌ನ ಪೀಪ್ಲೋಡಿ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡ ಕುಸಿದು ಅವಶೇಷಗಳಡಿಯಲ್ಲಿ ಸಿಲುಕಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. 30 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ದುರಂತ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಟ್ಟಡ ಕುಸಿದಾಗ 7 ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯೊಳಗಿದ್ದರು. ಐದು ಮಕ್ಕಳು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೈದ್ಯಕೀಯ ಅಧಿಕಾರಿಗಳ ಪ್ರಕಾರ, ಇನ್ನೂ ಹನ್ನೆರಡು ಮಂದಿ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಕಟ್ಟಡ ಕುಸಿದಾಗ ದೊಡ್ಡ ಅಪಘಾತದ ಶಬ್ದ ಕೇಳಿ ಗ್ರಾಮಸ್ಥರು ಮತ್ತು ಶಾಲಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಯಿತು, ಸ್ಥಳೀಯರು ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಮಕ್ಕಳನ್ನು ಅವಶೇಷಗಳಿಂದ ಹೊರತೆಗೆದರು. ಎಲ್ಲಾ ಗಾಯಗೊಂಡ ವಿದ್ಯಾರ್ಥಿಗಳನ್ನು ಮೊದಲು ಮನೋಹರ್ಥನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಗಾಯಗೊಂಡ ಮೂವತ್ತೈದು ಮಕ್ಕಳನ್ನು ನಮ್ಮ ಸೌಲಭ್ಯಕ್ಕೆ ತರಲಾಯಿತು. ಅವರಲ್ಲಿ ಹನ್ನೊಂದು ಮಂದಿ ಗಂಭೀರವಾಗಿದ್ದರು. ಈಗ ಹೆಚ್ಚಿನ ಚಿಕಿತ್ಸೆಗಾಗಿ ಜಲವಾರ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮನೋಹರ್ಥನಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ಕೌಶಲ್ ಲೋಧಾ ತಿಳಿಸಿದ್ದಾರೆ.
ಶಾಲಾ ಕಟ್ಟಡವು ತಿಂಗಳುಗಳಿಂದ ಶಿಥಿಲಾವಸ್ಥೆಯಲ್ಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ, ಸ್ಥಳೀಯಾಡಳಿತಕ್ಕೆ ಪದೇ ಪದೇ ದೂರುಗಳನ್ನು ನೀಡಿದ್ದರೂ ನಿರ್ಲಕ್ಷಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಪ್ರತಾಪ್ ಸಿಂಗ್ ಸಿಂಘ್ವಿ ಅವರು ಈ ಹಿಂದೆ ಬರೆದ ಪತ್ರವು ಈ ಪ್ರದೇಶದಲ್ಲಿ ಅಸುರಕ್ಷಿತ ಶಾಲಾ ಕಟ್ಟಡಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಆನ್‌ಲೈನ್ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.
ಪೋಷಕರಾದ ಬದ್ರಿಲಾಲ್, ಅಧಿಕಾರಿಗಳ ನಿರಾಸಕ್ತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡ ಕುಸಿದಾಗ ಸುಮಾರು 50 ಮಕ್ಕಳಿದ್ದರು. ಶಾಲೆಯ ಸ್ಥಿತಿಯ ಬಗ್ಗೆ ನಾನು ಹಲವು ಬಾರಿ ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದೆ, ಆದರೆ ಯಾವುದೇ ದುರಸ್ತಿ ಮಾಡಲಾಗಿಲ್ಲ ಎನ್ನುತ್ತಾರೆ.
ರಾಜಸ್ಥಾನ ಶಿಕ್ಷಣ ಸಚಿವ ಮದನ್ ದಿಲಾವರ್ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೂ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ಝಲಾವರ್‌ನ ಪಿಪ್ಲೋಡಿಯಲ್ಲಿ ಶಾಲಾ ಕಟ್ಟಡ ಕುಸಿದ ದುರಂತ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಸೂಚನೆಗಳನ್ನು ನೀಡಲಾಗಿದೆ. ದೇವರು ಅಗಲಿದ ಆತ್ಮಗಳಿಗೆ ಶಾಂತಿ ಮತ್ತು ಅವರ ಕುಟುಂಬಗಳಿಗೆ ಶಕ್ತಿಯನ್ನು ನೀಡಲಿ ಎಂದು ಬರೆದುಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಸಂತಾಪ ಸೂಚಿಸಿ, ರಾಜ್ಯ ಸರ್ಕಾರವು ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ರಾಜಕೀಯ ಭದ್ರಕೋಟೆ ಎಂದು ಕರೆಯಲ್ಪಡುವ ಝಲಾವರ್‌ನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಇಂತಹ ಘಟನೆಗಳು ಸರಣಿಯಾಗಿ ನಡೆದಿವೆ. ಈ ವರ್ಷದ ಆರಂಭದಲ್ಲಿ, ಬಿಕಾನೇರ್‌ನಲ್ಲಿ ನೀರಿನ ಟ್ಯಾಂಕ್‌ನ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಮೃತಪಟ್ಟಿದ್ದರು. ಮತ್ತೊಂದು ಪ್ರಕರಣದಲ್ಲಿ, ಬಾರ್ಮರ್‌ನ ಚೋಹ್ತಾನ್ ಬ್ಲಾಕ್‌ನಲ್ಲಿ ಶಾಲೆಯ ಗೋಡೆ ಕುಸಿದು ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದರು.
Advertisement