
ಪಣಜಿ: ಗೋವಾ ನೂತನ ರಾಜ್ಯಪಾಲರಾಗಿ ಮಾಜಿ ಕೇಂದ್ರ ಸಚಿವ ಅಶೋಕ್ ಗಜಪತಿ ರಾಜು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರು ಗಜಪತಿ ರಾಜು ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 74 ವರ್ಷದ ರಾಜು, ಜನ ಸೇವೆ ಸಲ್ಲಿಸುತ್ತಾ ಭಾರತದ ಸಂವಿಧಾನವನ್ನು ಅನುಸರಿಸುವುದಾಗಿ ಹೇಳಿದರು.
"ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತೇವೆ ಮತ್ತು ನಾನು ಸಹ ಗೋವಾದವರೊಂದಿಗೆ ನಂಟು ಹೊಂದಿದ್ದೇನೆ" ಎಂದು ಅವರು ಹೇಳಿದರು.
"ನನಗೆ ಸ್ಥಳೀಯ ಭಾಷೆ ಅರ್ಥವಾಗದಿದ್ದರೂ ಮತ್ತು ಈ(ಗವರ್ನರ) ಕಚೇರಿಯಲ್ಲಿ ಇದು ನನ್ನ ಮೊದಲ ಹುದ್ದೆಯಾದರೂ, ರಾಜಕೀಯ ವ್ಯವಸ್ಥೆಯಲ್ಲಿ ನನಗೆ ದೀರ್ಘ ಅನುಭವವಿದೆ. ಆಂಧ್ರಪ್ರದೇಶವನ್ನು ಎರಡು ರಾಜ್ಯಗಳಾಗಿ ವಿಭಜಿಸುವ ಮೊದಲು ನಾನು ಏಳು ಬಾರಿ ಶಾಸಕನಾಗಿದ್ದೆ" ಎಂದು ಅವರು ಹೇಳಿದರು.
ತಮ್ಮ ರಾಜಕೀಯ ವೃತ್ತಿಜೀವನವನ್ನು ಉಲ್ಲೇಖಿಸಿದ ರಾಜು ಅವರು, ಸಂಸತ್ತಿನಲ್ಲಿ ಅಲ್ಪಾವಧಿಯ ಅಧಿಕಾರಾವಧಿಯನ್ನು ಹೊಂದಿದ್ದನ್ನು ನೆನಪಿಸಿಕೊಂಡರು.
"ನಾನು ಕೇಂದ್ರ ಸರ್ಕಾರದಲ್ಲಿ ಸಚಿವನಾಗಿ ಮತ್ತು ವಿರೋಧ ಪಕ್ಷದ ಸದಸ್ಯನಾಗಿಯೂ ಕೆಲಸ ಮಾಡಿದ್ದೇನೆ. ನನಗೆ ವ್ಯಾಪಕ ಅನುಭವವಿದೆ" ಎಂದು ರಾಜ್ಯಪಾಲರು ಹೇಳಿದರು.
ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ(ಟಿಡಿಪಿ) ಹಿರಿಯ ನಾಯಕರಾದ ಗಜಪತಿ ರಾಜು ಅವರು ಮೇ 27, 2014 ರಿಂದ ಮಾರ್ಚ್ 10, 2018 ರ ವರೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು.
Advertisement