
ಚೆನ್ನೈ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಯನ್ನು ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಟೀಕಿಸಿದ್ದಾರೆ. ಹಿಂದುಳಿದ ಸಮುದಾಯಗಳ ಮತದಾರರನ್ನು ಸದ್ದಿಲ್ಲದೆ ತೆಗೆದುಹಾಕಲು ಪರಿಷ್ಕರಣೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಚುನಾವಣೆಯಲ್ಲಿ ತಮ್ಮ ಪರವಾಗಿ ಗೆಲುವು ಸಿಗಲು ಬಿಜೆಪಿ ಅಡ್ಡದಾರಿ ಹಿಡಿಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಹಾರದಲ್ಲಿ ಎಸ್ ಐಆರ್ ನಡೆಸುತ್ತಿರುವುದು ಸುಧಾರಣೆಯ ಬಗ್ಗೆ ಅಲ್ಲ. ಚುನಾವಣಾ ಫಲಿತಾಂಶವನ್ನು ಇಟ್ಟುಕೊಂಡು ಮಾಡುತ್ತಿದ್ದಾರೆ ಎಂದು ಸ್ಟಾಲಿನ್ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಬಿಹಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ದೆಹಲಿಯಲ್ಲಿ ಅಧಿಕಾರ ನಡೆಸುವವರು ತಮಗೆ ಒಮ್ಮೆ ಮತ ಹಾಕಿದವರು ಮತ್ತೆ ಮತ ಹಾಕುತ್ತಾರೆ ಎಂದು ಭಾವಿಸಿದ್ದಾರೆ.ಅದಕ್ಕಾಗಿಯೇ ಅವರು ಮತ ಚಲಾಯಿಸುವುದನ್ನು ಸಂಪೂರ್ಣವಾಗಿ ತಡೆಯಲು ಪ್ರಯತ್ನಿಸುತ್ತಿದ್ದಾರೆ.
ಚುನಾವಣೆಯನ್ನು ನಮ್ಮನ್ನು ಸೋಲಿಸಲು ಸಾಧ್ಯವಾಗದಿದ್ದರೆ, ಅಳಿಸಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಬೆಂಕಿಯೊಂದಿಗೆ ಆಟವಾಡಬೇಡಿ. ನಮ್ಮ ಪ್ರಜಾಪ್ರಭುತ್ವಕ್ಕೆ ಯಾವುದೇ ಬೆದರಿಕೆಯನ್ನು ದೃಢವಾದ ಪ್ರತಿರೋಧದೊಂದಿಗೆ ಎದುರಿಸಬೇಕಾಗುತ್ತದೆ ಎಂದು ಸ್ಟಾಲಿನ್ ಆಡಳಿತ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡು ತನ್ನ ಪೂರ್ಣ ಬಲದಿಂದ ಧ್ವನಿ ಎತ್ತುತ್ತದೆ. ತನ್ನಲ್ಲಿರುವ ಎಲ್ಲಾ ಪ್ರಜಾಪ್ರಭುತ್ವ ಅಸ್ತ್ರಗಳೊಂದಿಗೆ ಈ ಅನ್ಯಾಯದ ವಿರುದ್ಧ ಹೋರಾಡುತ್ತದೆ #BiharSIR ಮತ್ತು #QuitSIR ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು, ಸಂವಿಧಾನದಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬ ನಾಗರಿಕನು ಎಸ್ ಐಆರ್ ವಿರುದ್ಧ ದಂಗೆ ಏಳಬೇಕೆಂದು ಸ್ಟಾಲಿನ್ ಕರೆ ನೀಡಿದರು.
ಇದು ಕೇವಲ ಒಂದು ರಾಜ್ಯದ ಬಗ್ಗೆ ಅಲ್ಲ; ಇದು ನಮ್ಮ ಗಣರಾಜ್ಯದ ಅಡಿಪಾಯದ ಬಗ್ಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಪ್ರಜಾಪ್ರಭುತ್ವ ಜನರಿಗೆ ಸೇರಿದ್ದು. ಅದನ್ನು ಕದಿಯಲಾಗುವುದಿಲ್ಲ ಎಂದು ಹೇಳಿದರು.
ಈ ಮಧ್ಯೆ ನಿನ್ನೆ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅವರನ್ನು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯೊಂದಿಗೆ ಮುಂದುವರಿಯುವ ಮೊದಲು ತಕ್ಷಣವೇ ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದೆ.
ಜನವರಿ 1 ರಂದು ರಾಜ್ಯವು ಸಾಮಾನ್ಯ ಸಾರಾಂಶ ಪರಿಷ್ಕರಣೆಯ ಬದಲು ವಿಶೇಷ ಪರಿಷ್ಕರಣೆ ಅಭಿಯಾನವನ್ನು ಕೈಗೊಳ್ಳಲಿದೆ ಎಂಬ ವರದಿಗಳ ಬಗ್ಗೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಸಿಇಒಗೆ ಬರೆದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಇಂತಹ ಆತುರದ ಕಾರ್ಯವು ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಅಳಿಸಿಹಾಕಬಹುದು ಎಂದು ಎಚ್ಚರಿಸಿದ್ದರು.
Advertisement