
ಸಂಬಲ್ಪುರ: ಒಡಿಶಾದ ಬುರ್ಲಾದ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ(ವಿಮ್ಸಾರ್) ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಬ್ಬರು ಶನಿವಾರ ಸಂಬಲ್ಪುರ ಜಿಲ್ಲೆಯ ಜುಜೋಮುರಾ ಪ್ರದೇಶದ ದೇವ್‌ಹಾರನ್ ಜಲಪಾತದಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ರಾಜಸ್ಥಾನ ಮೂಲದ ಮೋನಿಕಾ ಮೀನಾ ಮತ್ತು ದೆಹಲಿಯ ಸಂದೀಪ್ ಪುರಿ ಎಂದು ಗುರುತಿಸಲಾಗಿದೆ.
ಜುಜೋಮುರಾ ಐಐಸಿ ಸಂಜಯ್ ರೌತ್ ಅವರ ಪ್ರಕಾರ, ಆರು ವಿದ್ಯಾರ್ಥಿಗಳ ಗುಂಪು ಜನಪ್ರಿಯ ಜಲಪಾತ ಸ್ಥಳಕ್ಕೆ ವಿಹಾರಕ್ಕೆ ಹೋಗಿತ್ತು. ಅವರು ಸ್ನಾನ ಮಾಡುತ್ತಿದ್ದಾಗ, ಹಠಾತ್ ಮಳೆಯಿಂದಾಗಿ ಹೊಳೆಯ ನೀರಿನ ಮಟ್ಟ ತೀವ್ರವಾಗಿ ಹೆಚ್ಚಾಗಿ ಇಬ್ಬರು ವಿದ್ಯಾರ್ಥಿಗಳು ಕೊಚ್ಚಿ ಹೋಗಿದ್ದರು.
ಸ್ಥಳೀಯ ಪ್ರವಾಸಿಗರು ಮತ್ತು ಉಳಿದ ವಿದ್ಯಾರ್ಥಿಗಳು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ನೀರಿನಿಂದ ಹೊರತೆಗೆದಿವೆ. ಆದರೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಬಂಡೆಗೆ ಡಿಕ್ಕಿ ಹೊಡೆದು ಮೋನಿಕಾ ತಲೆಗೆ ಗಾಯವಾಗಿದ್ದು, ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Advertisement