
ಚೆನ್ನೈ: ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ನೀಲಂಕಾರೈನಲ್ಲಿರುವ ನಟ ಹಾಗೂ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಅಧ್ಯಕ್ಷ ವಿಜಯ್ ಅವರ ನಿವಾಸಕ್ಕೆ ಭಾನುವಾರ ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀಲಂಕಾರೈ ಪೊಲೀಸರ ಪ್ರಕಾರ, "ನಟ-ರಾಜಕಾರಣಿಯ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಇಂದು ಬೆಳಗ್ಗೆ 5:20 ರ ಸುಮಾರಿಗೆ ಕರೆ ಮಾಡಲಾಗಿದೆ. ಬೆದರಿಕೆ ಬಂದ ಕೂಡಲೇ, ಮೂವರು ಬಾಂಬ್ ನಿಷ್ಕ್ರಿಯ ದಳದ ತಜ್ಞರು ಮತ್ತು ಸ್ನಿಫರ್ ನಾಯಿಯನ್ನು ವಿಜಯ್ ಅವರ ನಿವಾಸಕ್ಕೆ ಕಳುಹಿಸಲಾಯಿತು."
"ಸುಮಾರು ಒಂದು ಗಂಟೆ ಪರಿಶೀಲನೆಯ ನಂತರ, ಸ್ಥಳದಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ ಎಂದು ಬಾಂಬ್ ನಿಷ್ಕ್ರಿಯ ದಳ ದೃಢಪಡಿಸಿದೆ. ಅಧಿಕಾರಿಗಳು ಇದನ್ನು ಹುಸಿ ಬಾಂಬ್ ಬೆದರಿಕೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ನೀಲಂಕಾರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.
2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
Advertisement