
ನವದೆಹಲಿ: ಪಹಲ್ಗಾಮ್ ಗೆ ಉಗ್ರರು ಹೇಗೆ ಬಂದರು ಎಂಬುದರ ಬಗ್ಗೆ ರಕ್ಷಣಾ ಸಚಿವರು ಏನನ್ನೂ ಹೇಳುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಸೋಮವಾರ ಲೋಕಸಭೆಯಲ್ಲಿ ಆರೋಪಿಸಿದರು.
ಆಪರೇಷನ್ ಸಿಂಧೂರ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೋಕಸಭೆ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಕಷ್ಟು ಮಾಹಿತಿ ನೀಡಿದ್ದಾರೆ. ಆದರೆ ರಕ್ಷಣಾ ಸಚಿವರಾಗಿ ಉಗ್ರರು ಪಾಕಿಸ್ತಾನದಿಂದ ಹೇಗೆ ಪಹಲ್ಗಾಮ್ ಗೆ ಬಂದರು ಎಂಬುದರ ಬಗ್ಗೆ ಮಾಹಿತಿ ನೀಡಲಿಲ್ಲ. ರಾಷ್ಟ್ರದ ಹಿತದೃಷ್ಟಿಂದ ಇದರ ಬಗ್ಗೆ ಪ್ರಶ್ನಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಪ್ರತಿಪಕ್ಷಗಳು ಸೇರಿದಂತೆ ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತಿತ್ತು. ಆದಾಗ್ಯೂ ಇದಕ್ಕಿದ್ದಂತೆ ಮೇ 10 ರಂದು ಜಾರಿಯಾದ ಕದನ ವಿರಾಮ ಜಾರಿ ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿದೆ. ಪಾಕಿಸ್ತಾನ ಮುಂಡಿಯೂರು ಸಿದ್ಧ ಆಗಿದ್ರೆ ಸೇನಾ ಕಾರ್ಯಾಚರಣೆ ಯಾಕೆ ನಿಲ್ಲಿಸಿದ್ದೀರಿ, ಯಾರಿಗೆ ಶರಣಾಗಿದ್ದೀರಿ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕಾಗಿದೆ ಎಂದರು.
26 ಬಾರಿ ಕದನ ವಿರಾಮ ನಿಲ್ಲಿಸಿದ್ದು ನಾನೇ ಎಂದ ಟ್ರಂಪ್: ಕದನ ವಿರಾಮ ಜಾರಿಗೆ ಭಾರತ ಮತ್ತು ಪಾಕಿಸ್ತಾನ ಒತ್ತಾಯಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 26 ಬಾರಿ ಹೇಳಿದ್ದಾರೆ. ನಮ್ಮ ಎಷ್ಟು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬುದರ ಬಗ್ಗೆ ರಕ್ಷಣಾ ಸಚಿವರು ಮಾಹಿತಿ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ಕೇವಲ ಜನರಿಗಾಗಿ ಮಾತ್ರ ಇದನ್ನು ನಾವು ಕೇಳುತ್ತಿಲ್ಲ. ನಮ್ಮ ಯೋಧರಿಗಾಗಿಯೂ ಕೇಳುತ್ತಿದ್ದೇವೆ. ಏಕೆಂದರೆ ಅವರಿಗೂ ಸುಳ್ಳು ಹೇಳಲಾಗುತ್ತಿದೆ ಎಂದು ಗೊಗೊಯ್ ಆರೋಪಿಸಿದರು.
100 ಕಳೆದರೂ ಉಗ್ರರನ್ನು ಬಂಧಿಸದ ಸರ್ಕಾರ: ಪಹಲ್ಗಾಮ್ ದಾಳಿ ನಡೆದು 100 ದಿನಗಳಾದರೂ ಐವರು ಉಗ್ರರನ್ನು ಬಂಧಿಸುವಲ್ಲಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಡ್ರೋನ್, ಪೆಗಾಸಸ್, ಉಪ ಗ್ರಹಗಳು, ಸಿಆರ್ ಪಿಎಫ್, ಬಿಎಸ್ ಎಫ್, ಸಿಐಎಸ್ ಎಫ್ ಹೊಂದಿದ್ದರೂ ಉಗ್ರರನ್ನು ಇಂದಿಗೂ ಬಂಧಿಸಲು ಸಾಧ್ಯವಾಗಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Advertisement