
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ನಂತರ ಆಪರೇಷನ್ ಸಿಂದೂರ್ ನಡೆಸಿರುವುದು "ಸರ್ಕಾರದ ಗುಪ್ತಚರ ವೈಫಲ್ಯದ ಸಂಕೇತ" ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಆಪರೇಷನ್ ಸಿಂದೂರ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಖಿಲೇಶ್ ಯಾದವ್ ಅವರು, ಪಾಕಿಸ್ತಾನದೊಂದಿಗಿನ ಸಂಘರ್ಷವನ್ನು ಭಾರತ ಹಠಾತ್ತನೆ ಕೊನೆಗೊಳಿಸಿದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಮತ್ತು "ಯಾರ ಒತ್ತಡದಲ್ಲಿ ಕದನ ವಿರಾಮ ಘೋಷಿಸಲಾಯಿತು?" ಎಂದು ಕೇಳಿದರು.
ಭಾರತದ ವಿದೇಶಾಂಗ ನೀತಿ "ಸಂಪೂರ್ಣವಾಗಿ ಕುಸಿದಿದೆ" ಎಂದು ಆರೋಪಿಸಿದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, ಚೀನಾ "ನಮ್ಮ ಭೂಮಿ ಮತ್ತು ಮಾರುಕಟ್ಟೆಯನ್ನು ಕಬಳಿಸುವ" "ದೈತ್ಯ" ಎಂದರು.
"ಪಹಲ್ಗಾಮ್ ದಾಳಿಯಲ್ಲಿ ಗುಪ್ತಚರ ವೈಫಲ್ಯಕ್ಕೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?" ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದರು.
"ಪಹಲ್ಗಾಮ್ ದಾಳಿಯ ನಂತರ ಆಪರೇಷನ್ ಸಿಂದೂರ್ ಆರಂಭಿಸಿರುವುದು ಸರ್ಕಾರದ ಗುಪ್ತಚರ ವೈಫಲ್ಯದ ಸಂಕೇತವಾಗಿದೆ" ಎಂದು ವಾಗ್ದಾಳಿ ನಡೆಸಿದರು.
Advertisement