
ನವದೆಹಲಿ: ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡ ಸುಮಾರು ಎರಡು ಡಜನ್ ಮಕ್ಕಳನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) 'ದತ್ತು' ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದಿಂದ ನಡೆದ ಶೆಲ್ ದಾಳಿಯಲ್ಲಿ ಈ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದರು.
ಪೂಂಚ್ ಜಿಲ್ಲೆಯ 22 ಮಕ್ಕಳ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ರಾಹುಲ್ ಗಾಂಧಿ ಭರಿಸಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ (Congress) ಅಧ್ಯಕ್ಷ ತಾರಿಕ್ ಹಮೀದ್ ಕಾರಾ ಹೇಳಿದ್ದಾರೆ. ಇವರು ತಮ್ಮ ಪೋಷಕರು ಅಥವಾ ಕುಟುಂಬಕ್ಕಾಗಿ ದುಡಿಯುತ್ತಿದ್ದ ಸದಸ್ಯನನ್ನು ಕಳೆದುಕೊಂಡ ಮಕ್ಕಳು. "ಈ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಬುಧವಾರ ಮೊದಲ ಕಂತಿನ ಸಹಾಯವನ್ನು ಬಿಡುಗಡೆ ಮಾಡಲಾಗುವುದು. ಮಕ್ಕಳು ಪದವಿ ಪಡೆಯುವವರೆಗೆ ಈ ನೆರವು ಮುಂದುವರಿಯುತ್ತದೆ ಎಂದು ಕಾರಾ ಹೇಳಿದರು.
ಮೇ ತಿಂಗಳಲ್ಲಿ ರಾಹುಲ್ ಗಾಂಧಿ ಪೂಂಚ್‌ಗೆ ಭೇಟಿ ನೀಡಿದರು. ಅಲ್ಲಿ ಅವರು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಈ ಪೀಡಿತ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಲು ಕೇಳಿದರು. ಇದರ ನಂತರ, ಸಮೀಕ್ಷೆಯನ್ನು ನಡೆಸಲಾಗಿದ್ದು ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಯಿತು ಎಂದರು.
ರಾಹುಲ್ ಗಾಂಧಿ ಪೂಂಚ್‌ನಲ್ಲಿರುವ ಕ್ರೈಸ್ಟ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿದರು. ಅಲ್ಲಿ 12 ವರ್ಷದ ಅವಳಿ ಮಕ್ಕಳಾದ ಉರ್ಬಾ ಫಾತಿಮಾ ಮತ್ತು ಝೈನ್ ಅಲಿ ಕೂಡ ದಾಳಿಗೆ ಬಲಿಯಾದರು. ಮಕ್ಕಳೊಂದಿಗೆ ಮಾತನಾಡುತ್ತಾ ರಾಹುಲ್ ಹೇಳಿದರು, "ನನಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನೀವು ನಿಮ್ಮ ಪುಟ್ಟ ಸ್ನೇಹಿತರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರಬೇಕು. ಅದರ ಬಗ್ಗೆ ನನಗೆ ಬೇಸರವಾಗಿದೆ. ಈಗ ನೀವು ಸ್ವಲ್ಪ ಭಯಭೀತರಾಗಿದ್ದೀರಿ, ಆದರೆ ಭಯಪಡಬೇಡಿ, ಎಲ್ಲವೂ ಮತ್ತೆ ಸಾಮಾನ್ಯವಾಗುತ್ತದೆ. ಈ ಘಟನೆಗೆ ನಿಮ್ಮ ಪ್ರತಿಕ್ರಿಯೆಯೆಂದರೆ ನೀವು ಕಷ್ಟಪಟ್ಟು ಓದುವುದು, ಕಷ್ಟಪಟ್ಟು ಆಟವಾಡುವುದು ಮತ್ತು ಶಾಲೆಯಲ್ಲಿ ಬಹಳಷ್ಟು ಸ್ನೇಹಿತರನ್ನು ಮಾಡಿಕೊಳ್ಳುವುದು ಎಂದು ಹೇಳಿದ್ದರು.
ಆಪರೇಷನ್ ಸಿಂಧೂರ್ (Operation Sindoor) ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು 2025ರ ಮೇ 7ರಂದು ಪಾಕಿಸ್ತಾನದ (Pakistan) ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ನಿಖರವಾದ ದಾಳಿಗಳನ್ನು ನಡೆಸಿತು. ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಸಂಘಟನೆಗಳ ಅಡಗುತಾಣಗಳನ್ನು ನಾಶಪಡಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ಮೇ 8 ರಿಂದ 10 ರವರೆಗೆ ಜಮ್ಮು ಪ್ರದೇಶದಲ್ಲಿ, ವಿಶೇಷವಾಗಿ ಪೂಂಚ್‌ನಲ್ಲಿ ಭಾರೀ ಶೆಲ್ ದಾಳಿ, ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತು. ಈ ದಾಳಿಗಳಲ್ಲಿ 27 ಜನರು ಸಾವನ್ನಪ್ಪಿದರು. 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಅವಧಿಯಲ್ಲಿ ಪೂಂಚ್ ಜಿಲ್ಲೆ ಅತ್ಯಂತ ಹೆಚ್ಚು ಹಾನಿಗೊಳಗಾಗಿದ್ದು, 16 ಜನರು ಪ್ರಾಣ ಕಳೆದುಕೊಂಡಿದ್ದರು.
Advertisement