
ನವದೆಹಲಿ: ಮುಂಗಾರು ಋತುವಿನ ದ್ವಿತೀಯಾರ್ಧದಲ್ಲೂ(ಆಗಸ್ಟ್ ಮತ್ತು ಸೆಪ್ಟೆಂಬರ್) ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಗುರುವಾರ ತಿಳಿಸಿದೆ.
ಪೂರ್ವ ಭಾರತದ ಈಶಾನ್ಯ ಮತ್ತು ಪಕ್ಕದ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರು ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಮಳೆ ಸಾಮಾನ್ಯಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಮುಂಗಾರು ಋತುವಿನ ಮೊದಲಾರ್ಧದಲ್ಲಿ(ಜೂನ್ ಮತ್ತು ಜುಲೈ) ಭಾರತವು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಪಡೆದಿದೆ. ಕೆಲವು ರಾಜ್ಯಗಳು, ವಿಶೇಷವಾಗಿ ಹಿಮಾಚಲ ಪ್ರದೇಶವು ಹಠಾತ್ ಪ್ರವಾಹವನ್ನು ಅನುಭವಿಸಿತು.
"ಒಟ್ಟಾರೆಯಾಗಿ, ನೈಋತ್ಯ ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ (ದೀರ್ಘಾವಧಿಯ ಸರಾಸರಿ 422.8 ಮಿಮೀ) ಬೀಳುವ ಸಾಧ್ಯತೆಯಿದೆ" ಎಂದು ಮೊಹಾಪಾತ್ರ ತಿಳಿಸಿದ್ದಾರೆ.
"ಭೌಗೋಳಿಕವಾಗಿ, ಈಶಾನ್ಯ ಮತ್ತು ಪೂರ್ವ ಭಾರತದ ಅನೇಕ ಭಾಗಗಳು, ಮಧ್ಯ ಭಾರತದ ಪ್ರತ್ಯೇಕ ಪ್ರದೇಶಗಳು ಮತ್ತು ಪರ್ಯಾಯ ದ್ವೀಪ ಪ್ರದೇಶದ ನೈಋತ್ಯ ಪ್ರದೇಶಗಳನ್ನು ಹೊರತುಪಡಿಸಿ, ಹೆಚ್ಚಿನ ಪ್ರದೇಶಗಳಲ್ಲಿ ಸಾಮಾನ್ಯ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ" ಎಂದು ಅವರು ಹೇಳಿದ್ದಾರೆ.
ಜೂನ್ 1 ರಿಂದ ಜುಲೈ 31 ರವರೆಗೆ ದೇಶದಲ್ಲಿ ಸಾಮಾನ್ಯ 445.8 ಮಿಮೀ ಮಳೆಗೆ ಬದಲಾಗಿ 474.3 ಮಿಮೀ ಮಳೆಯಾಗಿದೆ, ಇದು ಶೇಕಡಾ ಆರು ರಷ್ಟು ಹೆಚ್ಚಳವಾಗಿದೆ.
Advertisement