
ರಾಂಚಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಚೈಬಾಸಾದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಮ್ಮ ವಿರುದ್ಧ ಹೊರಡಿಸಿರುವ ಜಾಮೀನು ರಹಿತ ಬಂಧನ ವಾರಂಟ್ ಪ್ರಶ್ನಿಸಿ ಜಾರ್ಖಂಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ವಿರುದ್ಧ ವಿಶೇಷ ಕೋರ್ಟ್ ಹೊರಡಿಸಿರುವ ವಾರಂಟ್ ಅನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.
ಮೇ 22, 2025 ರಂದು, ಚೈಬಾಸಾ ನ್ಯಾಯಾಲಯವು ರಾಹುಲ್ ಗಾಂಧಿ ವಿರುದ್ಧ ಜಾಮೀನು ರಹಿತ ಬಂಧ ವಾರಂಟ್ ಹೊರಡಿಸಿ, ಜೂನ್ 26 ರಂದು ಖುದ್ದಾಗಿ ಹಾಜರಾಗುವಂತೆ ನಿರ್ದೇಶಿಸಿದೆ.
ಇದಕ್ಕೂ ಮೊದಲು, ಅವರ ವಕೀಲರು ಸಿಆರ್‌ಪಿಸಿಯ ಸೆಕ್ಷನ್ 205 ರ ಅಡಿಯಲ್ಲಿ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿತು ಮತ್ತು ಅವರು ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿತ್ತು.
ರಾಹುಲ್ ಗಾಂಧಿ ಅವರು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ, ತಾವು ಈಗಾಗಲೇ ಹಾಜರಾತಿಯಿಂದ ವಿನಾಯಿತಿ ಕೋರಿ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದು ಇನ್ನೂ ಬಾಕಿ ಇದೆ. ಅಂತಹ ಪರಿಸ್ಥಿತಿಯಲ್ಲಿ, ಚೈಬಾಸಾ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿರುವುದು "ಅನ್ಯಾಯ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮಾರ್ಚ್ 18, 2018 ರಂದು ದೆಹಲಿಯಲ್ಲಿ ನಡೆದ ಎಐಸಿಸಿ ಸಮಗ್ರ ಅಧಿವೇಶನದಲ್ಲಿ ರಾಹುಲ್ ಗಾಂಧಿ, ಬಿಜೆಪಿ ನಾಯಕರನ್ನು "ಕೊಲೆಗಾರರು" ಮತ್ತು "ಸುಳ್ಳುಗಾರರು" ಎಂದು ಕಟುವಾಗಿ ಟೀಕಿಸಿದ್ದರು ಎಂದು ವರದಿಯಾಗಿದೆ.
ರಾಹುಲ್ ಗಾಂಧಿಯ ಈ ಹೇಳಿಕೆ ವಿರುದ್ಧ ಬಿಜೆಪಿ ಕಾರ್ಯಕರ್ತ ಪ್ರತಾಪ್ ಕುಮಾರ್ ಅವರು ಜುಲೈ 9, 2018 ರಂದು ಚೈಬಾಸಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಫೆಬ್ರವರಿ 2022 ರಲ್ಲಿ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿತು. ಅದನ್ನು ಅವರ ಕಚೇರಿ ಸ್ವೀಕರಿಸಿತು. ಆರಂಭಿಕ ವಿಚಾರಣೆ ಮತ್ತು ಸಾಕ್ಷ್ಯಗಳ ನಂತರ, ಪ್ರಕರಣವನ್ನು ಫೆಬ್ರವರಿ 2020 ರಲ್ಲಿ ಜಾರ್ಖಂಡ್ ಹೈಕೋರ್ಟ್ ಆದೇಶದ ಮೇರೆಗೆ ರಾಂಚಿಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ನಂತರ ಮತ್ತೊಂದು ಹೈಕೋರ್ಟ್ ಆದೇಶದ ಪ್ರಕಾರ ಅದನ್ನು ಮತ್ತೆ ಚೈಬಾಸಾದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಿಂತಿರುಗಿಸಲಾಯಿತು.
Advertisement