
ಜೈಪುರ: ದೇಶದ ಪ್ರತಿಷ್ಠಿತ 23 ಐಐಟಿಗಳಲ್ಲಿ 17,740 ಸೀಟುಗಳಿಗೆ ಮೇ 18 ರಂದು ಐಐಟಿ ಕಾನ್ಪುರ ಎರಡು ಪಾಳಿಗಳಲ್ಲಿ ನಡೆಸಿದ್ದ ಜೆಇಇ ಅಡ್ವಾನ್ಸ್ಡ್ 2025 ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ.
ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಸುಮಾರು 2.5 ಲಕ್ಷ ವಿದ್ಯಾರ್ಥಿಗಳು ಐಐಟಿ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿದ್ದರು.
ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಯ ಹೊರತಾಗಿಯೂ ರಾಜಸ್ಥಾನದ ಕೋಟಾ ಮತ್ತೊಮ್ಮೆ ಎಂಜಿನಿಯರಿಂಗ್ ಪರೀಕ್ಷೆಯ ತಯಾರಿಯ ಕೇಂದ್ರವಾಗಿ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದೆ. ಕೋಟಾದಲ್ಲಿ ತಯಾರಿ ನಡೆಸಿದ ರಜಿತ್ ಗುಪ್ತಾ, ಅಖಿಲ ಭಾರತ ರ್ಯಾಂಕಿಂಗ್(ಎಐಆರ್)ನಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ರಾಷ್ಟ್ರೀಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಕೋಟಾದ ಇತರ ಮೂವರು ವಿದ್ಯಾರ್ಥಿಗಳು ಸಹ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಸಕ್ಷಮ್ ಜಿಂದಾಲ್ ಅವರು ಎರಡನೇ ರ‍್ಯಾಂಕ್ ಪಡೆದರು, ಅಕ್ಷತ್ ಅವರು 6ನೇ ರ‍್ಯಾಂಕ್ ಮತ್ತು ದೇವೇಶ್ ಅವರು ಎಐಆರ್ ನಲ್ಲಿ 8ನೇ ಸ್ಥಾನ ಗಳಿಸಿದ್ದಾರೆ.
ಇತರ ಅನೇಕ ಅಭ್ಯರ್ಥಿಗಳು ಟಾಪ್ 50 ಮತ್ತು ಟಾಪ್ 100 ರ‍್ಯಾಂಕ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಖಿಲ ಭಾರತ ಟಾಪರ್ ರಜಿತ್ ಗುಪ್ತಾ ಕೋಟಾದ ಮಹಾವೀರ್ ನಗರ-IIIರ ನಿವಾಸಿಯಾಗಿದ್ದು, ಅವರ ತಂದೆ ದೀಪಕ್ ಗುಪ್ತಾ, ಬಿಎಸ್‌ಎನ್‌ಎಲ್ ನಲ್ಲಿ ಎಂಜಿನಿಯರ್ ಆಗಿದ್ದಾರೆ ಮತ್ತು ಅವರ ತಾಯಿ ಡಾ. ಶ್ರುತಿ ಅಗರ್ವಾಲ್, ಕೋಟಾದ ಜೆಡಿಬಿ ಬಾಲಕಿಯರ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ.
ಕೋಟಾ ಮೂಲದ ವಿದ್ಯಾರ್ಥಿ ಜೆಇಇ ಅಡ್ವಾನ್ಸ್‌ಡ್‌ನಲ್ಲಿ ಟಾಪರ್ ಆಗಿರುವುದು ಇದು ಸತತ ಎರಡನೇ ವರ್ಷ. 2024 ರಲ್ಲಿ, ಕೋಟಾದವರೇ ಆದ ವೇದ್ ಲಹೋಟಿ ಈ ಸಾಧನೆ ಮಾಡಿದ್ದರು.
ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್‌ಡ್ ಅಧಿಕೃತ ವೆಬ್‌ಸೈಟ್ https://jeeadv.ac.in/ ಅಥವಾ https://results25.jeeadv.ac.in ನೇರ ಲಿಂಕ್‌ನಿಂದ ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
Advertisement