
ನವದೆಹಲಿ: ದೆಹಲಿಯಲ್ಲಿರುವ ಪಶ್ಚಿಮ ಯುರೋಪಿಯನ್ ದೇಶದ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಪ್ರಜೆಯೊಬ್ಬರು ಚಾಣಕ್ಯಪುರಿ ಪ್ರದೇಶದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಚಿತ್ರವಿರುವ ಮತ್ತು "ವಾಂಟೆಡ್" ಎಂದು ಬರೆದಿರುವ ಪೋಸ್ಟರ್ ಗಳನ್ನು ದೆಹಲಿ ಪೊಲೀಸರು ಗಮನಿಸಿದ್ದಾರೆ. ಅಲ್ಲದೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಚಾಣಕ್ಯಪುರಿ ಠಾಣೆಯ ಪೊಲೀಸ್ ಸಿಬ್ಬಂದಿ ಇಂದು ಬೆಳಗ್ಗೆ 7.15 ರ ಸುಮಾರಿಗೆ ಬೀದಿ ದೀಪಗಳ ಕಂಬಗಳಲ್ಲಿ ಅಂಟಿಸಲಾದ ಎರಡು ಪೋಸ್ಟರ್‌ಗಳನ್ನು ಗಮನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ಪೋಸ್ಟರ್ ಮಲ್ಚಾ ಮಾರ್ಗ ಬಳಿ ಮತ್ತು ಇನ್ನೊಂದು ಅಮೆರಿಕನ್ ಎಂಬೆಸ್ಸಿ ಶಾಲೆಯ ಬಳಿ ವಿದ್ಯುತ್ ಕಂಬಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಪೋಸ್ಟರ್ ನೋಡಿದೆವು ಮತ್ತು ಈ ಪೋಸ್ಟರ್‌ಗಳ ಬಗ್ಗೆ ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅವರು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪರಾಧಿಯನ್ನು ಗುರುತಿಸಲು ಕಳೆದ ಒಂದು ವಾರದಿಂದ ಈ ಪ್ರದೇಶದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ಪೊಲೀಸರು ಸುಮಾರು 50 ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ, ಅದರಲ್ಲಿ ನೀಲಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬರು ಬೆಳಗ್ಗೆ 5.30 ರ ಸುಮಾರಿಗೆ ಸೈಕಲ್‌ನಲ್ಲಿ ಬಂದು ಬೀದಿದೀಪ ಕಂಬದ ಮೇಲೆ ಪೋಸ್ಟರ್‌ಗಳನ್ನು ಹಾಕಿರುವುದು ಕಂಡುಬಂದಿದೆ. ನಂತರ, ಅದೇ ವ್ಯಕ್ತಿ ಸರ್ದಾರ್ ಪಟೇಲ್ ಮಾರ್ಗದಲ್ಲಿರುವ ಒಂದು ಫ್ಲಾಟ್‌ನಿಂದ ಹೊರಬರುತ್ತಿರುವುದು ಕಂಡುಬಂದಿದೆ" ಎಂದು ಮೂಲಗಳು ತಿಳಿಸಿವೆ.
ಚಾಣಕ್ಯಪುರಿ ಪೊಲೀಸ್ ಠಾಣೆಯ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಗುರುತಿಸಲಾದ ಮನೆಗೆ ತೆರಳಿದಾಗ ನಿವಾಸಿ ಪಶ್ಚಿಮ ಯುರೋಪಿಯನ್ ರಾಷ್ಟ್ರದ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಯಿತು ಎಂದು ಮೂಲಗಳು ತಿಳಿಸಿವೆ. ತನಿಖಾಧಿಕಾರಿಗಳು ಅವರ ಎಲ್ಲಾ ವಿವರಗಳನ್ನು ಪಡೆದಿದ್ದಾರೆ.
ಆ ವ್ಯಕ್ತಿ ರಾಯಭಾರ ಕಚೇರಿಯ ವಿದೇಶಿ ಸಿಬ್ಬಂದಿಯಾಗಿರುವುದರಿಂದ, ಅವರಿಗೆ ರಾಜತಾಂತ್ರಿಕ ವಿನಾಯಿತಿ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದ್ದರಿಂದ, ಪೊಲೀಸರು ಈ ವಿಷಯದಲ್ಲಿ ಮುಂದಿನ ಕ್ರಮದ ಕುರಿತು ಗೃಹ ಸಚಿವಾಲಯದಿಂದ ಸ್ಪಷ್ಟನೆ ಕೋರಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಲು ಗೃಹ ಸಚಿವಾಲಯಕ್ಕೆ ಈಗಾಗಲೇ ವರದಿ ಕಳುಹಿಸಲಾಗಿದ್ದು, ಪೊಲೀಸರು ಅದರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.
Advertisement