
ಚೆನ್ನೈ: ಕನ್ನಡ ಭಾಷೆ ಬಗ್ಗೆ ಹೇಳಿಕೆ ನೀಡಿ ಕನ್ನಡಿಗರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಇಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಅವರ ಬಹುನಿರೀಕ್ಷಿತ ಥಗ್ ಲೈಫ್ ಚಿತ್ರ ಬಿಡುಗಡೆಯಾಗಬೇಕಾದರೆ ಕ್ಷಮೆ ಕೇಳಬೇಕೆಂದು ಇಂದು ಹೈಕೋರ್ಟ್ ನ್ಯಾಯಾಧೀಶರು ಹೇಳಿದರೂ ಇದುವರೆಗೆ ಕ್ಷಮೆ ಕೇಳಿಲ್ಲ.
ಬದಲಿಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಾವು ಯಾವ ಸಂದರ್ಭದಲ್ಲಿ ಕನ್ನಡ ಭಾಷೆ ಬಗ್ಗೆ ಹೇಳಿಕೆ ನೀಡಿದ್ದು ಮತ್ತು ತಮಗೆ ಕನ್ನಡ ಭಾಷೆ ಮೇಲೆ ಅಗೌರವ ಇಲ್ಲ, ಬದಲಿಗೆ ಪ್ರೀತಿಯಿದೆ ಎಂದು ಸಮರ್ಥನೆ ಕೊಟ್ಟಿದ್ದಾರೆ.
ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್‌ಕುಮಾರ್ ಹಾಗು ಶಿವರಾಜ್‌ಕುಮಾರ್ ಅವರ ಬಗ್ಗೆ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ನನ್ನ ಉದ್ದೇಶದ ವಿರುದ್ಧವಾಗಿ ಅದನ್ನು ಅರ್ಥ ಮಾಡಿಕೊಳ್ಳಲಾಗಿದೆ. ನಾವೆಲ್ಲರೂ ಒಂದೇ ಕುಟುಂಬದವರು ಎಂಬುದು ನನ್ನ ಉದ್ದೇಶವಾಗಿತ್ತು, ಕನ್ನಡ ಭಾಷೆಯ ಹಿರಿಮೆಯನ್ನು ಕುಗ್ಗಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಕನ್ನಡ ಭಾಷೆಯ ಶ್ರೀಮಂತ ಇತಿಹಾಸದ ಬಗ್ಗೆ ಯಾವುದೇ ಅನುಮಾನ ಇಲ್ಲ’ ಎಂದಿದ್ದಾರೆ ಕಮಲ್.
ಶಿವಣ್ಣನವರ ಬಗ್ಗೆ ವಿಷಾದವಿದೆ
ಥಗ್ ಲೈಫ್ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಶಿವರಾಜ್ ಕುಮಾರ್ ಈ ವಿಚಾರದಲ್ಲಿ ಸುಖಾಸುಮ್ಮನೆ ಮುಜುಗರ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಅವರ ಬಗ್ಗೆ ಅನುಕಂಪ, ವಿಷಾದ ಉಂಟಾಗುತ್ತಿದೆ, ಅವರದ್ದಲ್ಲದ ತಪ್ಪಿಗೆ ಇಂದು ಅವರು ಟೀಕೆ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಕೂಡ ಕಮಲ್ ಹಾಸನ್ ಹೇಳಿದ್ದು, ಪತ್ರದಲ್ಲಿ ಎಲ್ಲಿಯೂ ಕನ್ನಡಿಗರ ಕ್ಷಮೆ ಕೇಳಿಲ್ಲ.
Advertisement