
ಭೂಪಾಲ್: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶೂ ಧರಿಸಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೇರಿದಂತೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಶೂ ಬಿಚ್ಚದೆ ತನ್ನ ಅಜ್ಜಿಯ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಇದನ್ನು ನಾನು ಇಷ್ಟಪಡುವುದಿಲ್ಲ. ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು, ಅವರು ಅಂತಹ ವಿಷಯಗಳ ಬಗ್ಗೆ ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು ಎಂದರು.
ನಾವೆಲ್ಲರೂ ನಮ್ಮ ಸಂಸ್ಕೃತಿಯ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿರಬೇಕು. ಪ್ರತಿಯೊಬ್ಬರೂ ಭಾವನೆಗಳನ್ನು ಹೊಂದಿರುತ್ತಾರೆ ಎಂದು ಅವರು ತಿಳಿಸಿದರು.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹಿತೇಶ್ ವಾಜಪೇಯಿ, "ತಮ್ಮ ಅಜ್ಜಿಗೆ ಪುಷ್ಪ ನಮನ ಸಲ್ಲಿಸುವಾಗ ಶೂಗಳನ್ನು ತೆಗೆಯದ ವ್ಯಕ್ತಿ, ಭಾರತ ಮಾತೆಯ ಗೌರವವನ್ನು ಹೇಗೆ ಎತ್ತಿ ಹಿಡಿಯಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರಂತಹ ಸಂಸ್ಕೃತಿ ಹೀನ ನಾಯಕನ್ನು ಹೊಂದಿರುವ ಕಾಂಗ್ರೆಸ್, ಈ ದೇಶದಲ್ಲಿ ಪುನಶ್ಚೇತನಗೊಳ್ಳುವ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದ್ದಾರೆ.
Advertisement