
ವಿದೇಶಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಅಮೆರಿಕದ ನಿರ್ಧಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್, ಪ್ರಧಾನಿ ಮೋದಿ ಹಾಗೂ ವಿದೆಶಾಂಗ ಸಚಿವ ಎಸ್ ಜೈಶಂಕರ್ ಮೌನವನ್ನು ಖಂಡಿಸಿದೆ.
ಅಮೆರಿಕ ನಿರ್ಧಾರದ ವಿಷಯವಾಗಿ ಚೀನಾ ತನ್ನ ವಿದ್ಯಾರ್ಥಿಗಳ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದೆ ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕದ ಈ ಕ್ರಮದಿಂದ ಭಾರತೀಯ ವಿದ್ಯಾರ್ಥಿಗಳಿಗೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎಂಬುದರ ಬಗ್ಗೆ "ಸಂಪೂರ್ಣವಾಗಿ ಮೌನ" ವಹಿಸಿದ್ದಾರೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ವಿದೇಶಾಂಗ ಸಚಿವಾಲಯದ ಪ್ರಕಾರ, 2024 ರಲ್ಲಿ ಸುಮಾರು 3,37,630 ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾರೆ ಮತ್ತು ಅಮೆರಿಕದ ಕ್ಯಾಂಪಸ್‌ಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಿದೇಶಿ ವಿದ್ಯಾರ್ಥಿಗಳು ಭಾರತದಿಂದ ಬಂದವರು ಎಂದು ಕಾಂಗ್ರೆಸ್ ಉಸ್ತುವಾರಿ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಗಮನಸೆಳೆದಿದ್ದಾರೆ.
ಇದರರ್ಥ ಸುಮಾರು ಮೂರೂವರೆ ಲಕ್ಷ ಭಾರತೀಯ ಕುಟುಂಬಗಳು ತಮ್ಮ ಕಷ್ಟಪಟ್ಟು ಸಂಪಾದಿಸಿದ ಉಳಿತಾಯವನ್ನು ಹೂಡಿಕೆ ಮಾಡಿದ್ದಾರೆ ಅಥವಾ ಅಮೆರಿಕದಲ್ಲಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದಾರೆ ಎಂದು ಅವರು ಹೇಳಿದರು.
"ಈ ವಿದ್ಯಾರ್ಥಿಗಳು, ಜೊತೆಗೆ ಹಿಂದಿನ ವರ್ಷಗಳಲ್ಲಿ ಹೋದವರು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಾರೆ. 2025 ರಲ್ಲಿ ಹೋಗಲು ಯೋಜಿಸುತ್ತಿರುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತಮ್ಮ ಆಕಾಂಕ್ಷೆಗಳು ಈಡೇರುವುದನ್ನು ಎಂದಿಗೂ ನೋಡಲು ಸಾಧ್ಯವಾಗುವುದಿಲ್ಲ" ಎಂದು ರಮೇಶ್ X ನಲ್ಲಿ ಹೇಳಿದ್ದಾರೆ.
"ಅಧ್ಯಕ್ಷ ಟ್ರಂಪ್ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದಾರೆ. ಚೀನಾ ಚೀನಾದ ವಿದ್ಯಾರ್ಥಿಗಳ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದೆ. ಆದರೆ ಆಶ್ಚರ್ಯವೇನಿಲ್ಲ, ನಮ್ಮ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಸಂಪೂರ್ಣವಾಗಿ ಮೌನವಾಗಿದ್ದಾರೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಆಪರೇಷನ್ ಸಿಂಧೂರ್ ನ್ನು ಕೇವಲ ನಾಲ್ಕು ದಿನಗಳಲ್ಲಿ ನಿಲ್ಲಿಸಲಾಗಿದೆ ಎಂಬ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಗಳ ಬಗ್ಗೆಯೂ ಮೋದಿ ಹಾಗೂ ಜೈಶಂಕರ್ ಸಂಪೂರ್ಣವಾಗಿ ಮೌನವಾಗಿದ್ದಾರೆ ಮತ್ತು ಅಧ್ಯಕ್ಷ ಟ್ರಂಪ್ ಅವರ ಕ್ರಮಗಳಿಂದ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಹೇಗೆ ಕೆಟ್ಟದಾಗಿ ಪರಿಣಾಮ ಬೀರುತ್ತಿವೆ ಎಂಬುದರ ಬಗ್ಗೆ ಅವರು ಒಂದೇ ಒಂದು ಮಾತನ್ನೂ ಹೇಳಿಲ್ಲ" ಎಂದು ರಮೇಶ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ರಂಪ್ ಆಡಳಿತ ಹೊಸ ವಿದ್ಯಾರ್ಥಿ ವೀಸಾ ಸಂದರ್ಶನಗಳನ್ನು ಸ್ಥಗಿತಗೊಳಿಸುವುದರ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಭಾರತೀಯ ವಿದ್ಯಾರ್ಥಿಗಳ ವೀಸಾ ಅರ್ಜಿಗಳನ್ನು ಅರ್ಹತೆಯ ಆಧಾರದ ಮೇಲೆ ಅಮೆರಿಕ ಪರಿಗಣಿಸುತ್ತದೆ ಎಂದು ಭಾರತ ಕಳೆದ ಗುರುವಾರ ಹೇಳಿದೆ. ಅಮೆರಿಕ ತನ್ನ ವೀಸಾ ಆಡಳಿತದಲ್ಲಿ ತಂದಿರುವ ಬದಲಾವಣೆಗಳು ಭಾರತ ಸೇರಿದಂತೆ ವಿಶ್ವದಾದ್ಯಂತ ವಿದ್ಯಾರ್ಥಿಗಳಲ್ಲಿ ವ್ಯಾಪಕ ಅನಿಶ್ಚಿತತೆಯನ್ನು ಹುಟ್ಟುಹಾಕಿವೆ.
ವಿದ್ಯಾರ್ಥಿ ವೀಸಾ ಅರ್ಜಿದಾರರ ಸಾಮಾಜಿಕ ಮಾಧ್ಯಮ ಪರಿಶೀಲನೆಯನ್ನು ವಿಸ್ತರಿಸುವ ಟ್ರಂಪ್ ಆಡಳಿತದ ಯೋಜನೆಯ ಬಗ್ಗೆ ಅಮೆರಿಕದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಕಳವಳಗಳಿವೆ.
Advertisement