
ಬೆಂಗಳೂರು: ನಟ ಕಮಲ್ ಹಾಸನ್ ಅವರ ಮುಂಬರುವ ತಮಿಳು ಚಿತ್ರ 'ಥಗ್ ಲೈಫ್' ಬಿಡುಗಡೆಯನ್ನು ವಿರೋಧಿಸುವ ಜನರ ಬೆದರಿಕೆಗಳಿಂದ ಚಿತ್ರಮಂದಿರಗಳು ಮತ್ತು ನಾಗರಿಕರನ್ನು ರಕ್ಷಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಕರ್ನಾಟಕದಲ್ಲಿ "ಸಾಂವಿಧಾನಿಕ ಆಡಳಿತ ಕುಸಿತ" ಎಂದು ಹೇಳಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ ವಕೀಲ ಅಥೇನಮ್ ವೇಲನ್, "ನಾನು, ನನ್ನ ತಂಡದ ಸದಸ್ಯರಾದ ನವಪ್ರೀತ್ ಕೌರ್, ನಿಲಯ್ ರೈ ಮತ್ತು ಪ್ರಿನ್ಸ್ ಸಿಂಗ್ ಅವರೊಂದಿಗೆ, ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ಕರ್ನಾಟಕ ವಿಫಲವಾಗಿದೆ ಎಂದು ಎತ್ತಿ ತೋರಿಸಲು ಈ ಪಿಐಎಲ್ ಸಲ್ಲಿಸಿದ್ದೇವೆ.
ಚಿತ್ರಮಂದಿರಗಳು ಮತ್ತು ನಾಗರಿಕರಿಗೆ ಬಹಿರಂಗವಾಗಿ ಬೆದರಿಕೆ ಹಾಕಲು ಅವಕಾಶ ಮಾಡಿಕೊಟ್ಟಿದೆ, ಇದು ಕಾನೂನಿನ ನಿಯಮವನ್ನು ಹಾಳುಮಾಡುವ ಭಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.
ಇಂದು ದೇಶಾದ್ಯಂತ ಬಿಡುಗಡೆಯಾಗಿರುವ ಥಗ್ ಲೈಫ್ ಚಿತ್ರವನ್ನು ಕನ್ನಡಪರ ಸಂಘಟನೆಗಳ ಬೆದರಿಕೆಗಳು, ಆಕ್ರೋಶ, ವಿರೋಧಗಳಿಂದಾಗಿ ಹೈಕೋರ್ಟ್ ತಡೆಯೊಡ್ಡಿದೆ. ವಿವಿಧ ಸಂಘಟನೆಗಳ ಬೆದರಿಕೆಗಳ ಹೊರತಾಗಿಯೂ, ಯಾವುದೇ ಪ್ರಮುಖ ಕನ್ನಡ ನಟ ಅಥವಾ ಗಣ್ಯ ವ್ಯಕ್ತಿ ಬಹಿಷ್ಕಾರದ ಕರೆಯನ್ನು ಬೆಂಬಲಿಸಿಲ್ಲ ಮತ್ತು ಯಾವುದೇ ಅಧಿಕೃತ ನಿಷೇಧವನ್ನು ವಿಧಿಸಲಾಗಿಲ್ಲ.
ಇದು ಪರೋಕ್ಷ ಸೆನ್ಸಾರ್‌ಶಿಪ್‌ಗೆ ಸಮನಾಗಿರುತ್ತದೆ ಮತ್ತು ಸಂವಿಧಾನದ 19(1)(a) ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಪಿಐಎಲ್ ವಾದಿಸುತ್ತದೆ. ಹಿಂಸಾಚಾರಕ್ಕೆ ಬೆದರಿಕೆ ಹಾಕುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು, ಎಲ್ಲಾ ಸಿನಿಮಾ ಮಂದಿರಗಳನ್ನು ರಕ್ಷಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ.
ಕಾನೂನುಬಾಹಿರ ಬೆದರಿಕೆಗಳು ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
Advertisement