
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜು ಜನತಾದಳ(ಬಿಜೆಡಿ)ದ ಹಿರಿಯ ನಾಯಕ ಪಿನಾಕಿ ಮಿಶ್ರಾ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.
ದಿ ಟೆಲಿಗ್ರಾಫ್ ಇಂಡಿಯಾ ವರದಿಯ ಪ್ರಕಾರ, ಮೇ 3 ರಂದು ಮಹುವಾ ಹಾಗೂ ಪಿನಾಕಿ ಅವರ ವಿವಾಹವು ಸಂಪೂರ್ಣವಾಗಿ ಖಾಸಗಿಯಾಗಿ ನಡೆಯಿತು. ಇಬ್ಬರೂ ನಾಯಕರು ತಮ್ಮ ಮದುವೆಯ ವಿಚಾರವನ್ನು ಅತ್ಯಂತ ರಹಸ್ಯವಾಗಿಟ್ಟಿದ್ದರು. ಪಕ್ಷದ ಒಳಗಿನವರಿಗೂ ಈ ಬೆಳವಣಿಗೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, 50 ವರ್ಷದ ಮಹುವಾ ಮೊಯಿತ್ರಾ ಅವರು 65 ವರ್ಷದ ಪಿನಾಕಿ ಮಿಶ್ರಾ ಅವರನ್ನು ವರಿಸಿದ್ದಾರೆ. ಆದರೆ ಈ ಬಗ್ಗೆ ಪಿನಾಕಿ ಮಿಶ್ರಾ ಅಥವಾ ಮೊಯಿತ್ರಾ ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಟಿಎಂಸಿ ಸಂಸದೆ ಚಿನ್ನದ ಆಭರಣಗಳನ್ನು ಅಲಂಕರಿಸಿ, ಬಿಜೆಡಿ ನಾಯಕನ ಕೈಹಿಡಿದು ನಗುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ಕೃಷ್ಣನಗರದಿಂದ ಎರಡನೇ ಬಾರಿ ಸಂಸದೆಯಾಗಿರುವ ಮಹುವಾ ಮೊಯಿತ್ರಾ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಈ ಮೊದಲು ಅವರು ಡೆನ್ಮಾರ್ಕ್ ಉದ್ಯಮಿ ಲಾರ್ಸ್ ಬ್ರೋರ್ಸನ್ ಅವರನ್ನು ಮದುವೆಯಾಗಿದ್ದರು.
ಪುರಿಯಿಂದ ನಾಲ್ಕು ಬಾರಿ ಸಂಸದರಾಗಿರುವ ಪಿನಾಕಿ ಮಿಶ್ರಾ ಅವರಿಗೂ ಇದು ಎರಡನೇ ಮದುವೆಯಾಗಿದ್ದು, ಅವರು ಈ ಹಿಂದೆ ಸಂಗೀತಾ ಮಿಶ್ರಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಈಗ, ಮೊಯಿತ್ರಾ ಮತ್ತು ಮಿಶ್ರಾ ವಿವಾಹ ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲ. ಆದರೆ ವೈರಲ್ ಆಗುತ್ತಿರುವ ಚಿತ್ರಗಳು ಮತ್ತು ವರದಿಗಳು ರಾಜಕೀಯ ವಲಯಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿವೆ.
Advertisement