ಉತ್ತರ ಸಿಕ್ಕಿಂ: ಭೂಕುಸಿತದಲ್ಲಿ ಸಿಲುಕಿದ್ದ 76 ಸೇನಾ ಸಿಬ್ಬಂದಿ ರಕ್ಷಣೆ; Video
ಗ್ಯಾಂಗ್ಟೋಕ್: ಸಿಕ್ಕಿಂನ ಛಾಟೆನ್ ಬಳಿಯ ಸೇನಾ ಶಿಬಿರದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿದ್ದ 76 ಸೇನಾ ಸಿಬ್ಬಂದಿಯನ್ನು ಏರ್ ಲಿಫ್ಟ್ ಮಾಡಲಾಗಿದೆ.
ಭಾರೀ ಮಳೆಯಿಂದಾಗಿ ಹಲವಾರು ಭೂಕುಸಿತಗಳು ಸಂಭವಿಸಿವೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಅಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ಪ್ರವಾಸಿಗರನ್ನು ರಕ್ಷಿಸಿ ಸ್ಥಳಾಂತರಿಸುವ ಪ್ರಯತ್ನಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆಯಾಗಿ 76 ಸೇನಾ ಸಿಬ್ಬಂದಿಯನ್ನು ಮೂರು MI-17 ಹೆಲಿಕಾಪ್ಟರ್‌ಗಳ ಮೂಲಕ ಕರೆತರಲಾಯಿತು. ಇಂದು ಹೆಲಿಕಾಪ್ಟರ್‌ಗಳು ಸೇನಾ ಸಿಬ್ಬಂದಿಯನ್ನು ಚಾಟೆನ್‌ನಿಂದ ಪಾಕ್ಯೊಂಗ್ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಸಾಗಿಸುವುದರೊಂದಿಗೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಒಟ್ಟಾರೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದೆ. ವಿಪತ್ತು ಪೀಡಿತ ಪ್ರದೇಶದಲ್ಲಿ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸಲು ಮತ್ತು ನೈಸರ್ಗಿಕ ವಿಕೋಪಗಳಿಂದ ಪೀಡಿತರಿಗೆ ಸಹಾಯ ಮಾಡಲು ಬದ್ಧವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಉತ್ತರ ಸಿಕ್ಕಿಂನಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದಾಗಿ ಅನೇಕ ಭೂಕುಸಿತಗಳು ಸಂಭವಿಸಿದ್ದು, ರಸ್ತೆ ಸಂಪರ್ಕ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ, 1,600 ಕ್ಕೂ ಹೆಚ್ಚು ಪ್ರವಾಸಿಗರು ಲಾಚೆನ್, ಲಾಚುಂಗ್ ಮತ್ತು ಚುಂಗ್‌ಥಾಂಗ್ ಪಟ್ಟಣಗಳಲ್ಲಿ ಸಿಲುಕಿಕೊಂಡಿದ್ದರು.
ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಗಡಿ ರಸ್ತೆಗಳ ಸಂಸ್ಥೆ (BRO), ಮತ್ತು ಮಂಗನ್ ಜಿಲ್ಲಾಡಳಿತವು ಹಲವು ದಿನಗಳ ಕಾಲ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಿ, ಸಿಕ್ಕಿಬಿದ್ದ ಎಲ್ಲಾ ಪ್ರವಾಸಿಗರು ಮತ್ತು ಸ್ಥಳೀಯ ಜನರನ್ನು ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
140 ಕ್ಕೂ ಹೆಚ್ಚು ಪ್ರವಾಸಿಗರನ್ನು ವಿಮಾನದ ಮೂಲಕ ಸ್ಥಳಾಂತರಿಸಲು ಹಲವಾರು ಹೆಲಿಕಾಪ್ಟರ್‌ಗಳನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಜೂನ್ 1 ರ ಸಂಜೆ ಚಾಟೆನ್‌ನಲ್ಲಿ ಸೇನಾ ಶಿಬಿರದಲ್ಲಿ ಭೂಕುಸಿತ ಸಂಭವಿಸಿದ ನಂತರ ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿದರು, ನಾಲ್ವರು ಗಾಯಗೊಂಡರು ಮತ್ತು ಆರು ಮಂದಿ ನಾಪತ್ತೆಯಾಗಿದ್ದರು, ಕಾಣೆಯಾದ ಸೈನಿಕರನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.