ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರತಿಭಟನಾಕಾರರು ಯತ್ನ; ಕರ್ಫ್ಯೂ ಜಾರಿ

ಪ್ರತಿಭಟನಾಕಾರರು ರಸ್ತೆಗಳ ಮಧ್ಯದಲ್ಲಿ ಟೈರ್‌ಗಳು ಮತ್ತು ಹಳೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Protesters threaten to set themselves on fire
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರತಿಭಟನಾಕರರು
Updated on

ಇಂಫಾಲ್: ಕೆಲವು ದಿನಗಳಿಂದ ತಣ್ಣಗಾಗಿದ್ದ ಮಣಿಪುರದ ಹಲವು ಕಣಿವೆ ಜಿಲ್ಲೆಗಳಲ್ಲಿ ಮತ್ತೆ ಹಿಂಸಾಚಾರ, ಉದ್ವಿಗ್ನತೆ ಭುಗಿಲೆದ್ದಿದೆ. ಇದರಿಂದಾಗಿ ಅನೇಕ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಶನಿವಾರ ರಾತ್ರಿ ಮೈತೆಯಿ ಸಂಘಟನೆ ಅರಾಂಬೈ ಟೆಂಗೋಲ್ ನಾಯಕ ಮತ್ತಿತರ ಸದಸ್ಯರನ್ನು ಬಂಧಿಸಿದ ನಂತರ ಅಶಾಂತಿ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ರಸ್ತೆಗಳ ಮಧ್ಯದಲ್ಲಿ ಟೈರ್‌ಗಳು ಮತ್ತು ಹಳೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ: ವಿಮಾನ ನಿಲ್ದಾಣದ ಪ್ರವೇಶದ್ವಾರಕ್ಕೆ ಘೇರಾವ್ ಹಾಕಿ, ನಾಯಕನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭದ್ರತಾ ಪಡೆಗಳೊಂದಿಗೆ ಸಂಘರ್ಷ ನಡೆಸಿದ್ದಾರೆ. ಅವರಲ್ಲಿ ಕೆಲವರು ಇಂಫಾಲದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಾಹುತಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಭಾನುವಾರವೂ ಪರಿಸ್ಥಿತಿ ಉದ್ವಿಗ್ನವಾಗಿತ್ತು.

ಅರಾಂಬೈ ಟೆಂಗೋಲ್ ಸಂಘಟನೆಯ ನಾಯಕನ ಬಂಧನ: ಅರಾಂಬೈ ಟೆಂಗೋಲ್ ಸಂಘಟನೆಯ ನಾಯಕನನ್ನು ಬಂಧಿಸಲಾಗಿದೆ ಎಂದು ವರದಿಗಳ ನಂತರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಂಧಿತ ವ್ಯಕ್ತಿಯ ಗುರುತು ಅಥವಾ ಆತನ ವಿರುದ್ಧದ ಆರೋಪಗಳನ್ನು ಪೊಲೀಸರು ಬಹಿರಂಗಪಡಿಸದಿದ್ದರೂ, ನಾಯಕ ಕಾನನ್ ಸಿಂಗ್ ಎಂದು ವರದಿಗಳು ಹೇಳುತ್ತಿವೆ. ಶನಿವಾರ ರಾತ್ರಿ ರಾಜ್ಯದ ರಾಜಧಾನಿಯಾದ್ಯಂತ ಅನೇಕ ಸ್ಥಳಗಳಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು.

ಇಂಫಾಲ್ ಪೂರ್ವ ಜಿಲ್ಲೆಯ ಖುರಾಯ್ ಲಾಮ್‌ಲಾಂಗ್ ಪ್ರದೇಶದಲ್ಲಿ, ಆಕ್ರೋಶಗೊಂಡ ಗುಂಪೊಂದು ಬಸ್‌ಗೆ ಬೆಂಕಿ ಹಚ್ಚಿದೆ. ಕ್ವಾಕೀಥೆಲ್‌ನಲ್ಲಿ ಗುಂಡಿನ ಸದ್ದುಗಳು ಕೇಳಿಬಂದಿವೆ. ಆದರೂ ಯಾರು ಗುಂಡು ಹಾರಿಸಿದರು ಎಂಬುದು ಸ್ಪಷ್ಟವಾಗಿಲ್ಲ.

ಭದ್ರತಾ ಪಡೆಗಳ ಲಾಠಿಜಾರ್ಜ್: ಓರ್ವ ಸಾವು:

ಬಂಧಿತ ನಾಯಕನನ್ನು ರಾಜ್ಯದಿಂದ ಹೊರಗೆ ಕರೆದೊಯ್ಯಲಾಗುತ್ತಿದೆ ಎಂಬ ವರದಿಗಳ ನಂತರ ಪ್ರತಿಭಟನಾಕಾರರು ತುಲಿಹಾಲ್‌ನಲ್ಲಿರುವ ಇಂಫಾಲ್ ವಿಮಾನ ನಿಲ್ದಾಣದ ಗೇಟ್‌ನ ಹೊರಗೆ ಜಮಾಯಿಸಿದರು. ಮಣಿಪುರದಿಂದ ನಾಯಕನನ್ನು ಸ್ಥಳಾಂತರಿಸುವುದನ್ನು ತಡೆಯುವ ಉದ್ದೇಶದಿಂದ ಪ್ರತಿಭಟನಾಕಾರರು ರಾತ್ರಿಯಿಡೀ ವಿಮಾನ ನಿಲ್ದಾಣ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ ಸಿಡಿಸಿದರು.

ಭದ್ರತಾ ಪಡೆಗಳ ಲಾಠಿ ಚಾರ್ಜ್‌ನಿಂದಾಗಿ ಪ್ರತಿಭಟನಾಕಾರನೊಬ್ಬ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಉದ್ವಿಗ್ನ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರಾಜಭವನಕ್ಕೆ ಹೋಗುವ ರಸ್ತೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ:

ಬಿಷ್ಣುಪುರ್ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಕಣಿವೆ ಜಿಲ್ಲೆಗಳಾದ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಾಲ್ ಮತ್ತು ಕಕ್ಚಿಂಗ್‌ಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆಯನ್ನು ನಿರ್ಬಂಧಿಸುವ ನಿಷೇಧಾಜ್ಞೆಗಳನ್ನು ಜಾರಿಗೊಳಿಸಲಾಗಿದೆ. ಆನ್‌ಲೈನ್‌ನಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನಗಳ ತಡೆ ಉದ್ದೇಶದೊಂದಿಗೆ ಈ ಜಿಲ್ಲೆಗಳಲ್ಲಿ ಐದು ದಿನಗಳವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅರಂಬೈ ಟೆಂಗೋಲ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲು ಸಿದ್ಧತೆ ನಡೆಸುತ್ತಿರುವಂತೆಯೇ ಕಣಿವೆ ಜಿಲ್ಲೆಗಳಲ್ಲಿ ಇಂದಿನಿಂದ ಹತ್ತು ದಿನಗಳ ಸಂಪೂರ್ಣ ಬಂದ್ ಘೋಷಿಸಿದೆ.

Protesters threaten to set themselves on fire
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಇಂಟರ್ನೆಟ್ ಸೇವೆ ಸ್ಥಗಿತ, ಹಲವೆಡೆ ಕರ್ಫ್ಯೂ ಜಾರಿ...!

ಮೇ 2023 ರಿಂದ 260 ಕ್ಕೂ ಹೆಚ್ಚು ಮಂದಿ ಸಾವು:

ಮೇ 2023 ರಿಂದ ಮೈತೆಯಿ ಮತ್ತು ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com