
ಲಖನೌ: ಟೀಂ ಇಂಡಿಯಾ ಸ್ಪೋಟಕ ಬ್ಯಾಟರ್ ರಿಂಕು ಸಿಂಗ್ ಹಾಗೂ ಸಂಸದೆ ಪ್ರಿಯಾ ಸರೋಜ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇಂದು ನಿಶ್ಚಿತಾರ್ಥ ಸಮಾರಂಭ ನಡೆದಿದೆ.
ಲಖನೌನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಿಯಾ ಸರೋಜ್ ಕೈಗೆ ರಿಂಕು ಸಿಂಗ್ ಉಂಗುರ ಹಾಕಿದ್ದಾರೆ. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಸಂಸದೆ ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಶ್ಚಿತಾರ್ಥ ಸಮಾರಂಭದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಜಯಾ ಬಚ್ಚನ್, ಸಂಸದ ಇಕ್ರಾ ಹಸನ್, ರಾಮ್ ಗೋಪಾಲ್ ಯಾದವ್ ಮತ್ತು ಇತರ ಹಿರಿಯ ರಾಜಕಾರಣಿಗಳು ಹಾಗೂ ಕ್ರಿಕೆಟ್ ವಲಯದ ಗಣ್ಯರು ಪಾಲ್ಗೊಂಡರು.
ರಿಂಕು ಮತ್ತು ಪ್ರಿಯಾ ಅವರು ನವೆಂಬರ್ 18, 2025 ರಂದು ವಾರಣಾಸಿಯಲ್ಲಿ ವಿವಾಹವಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ವೈರಲ್ ವೀಡಿಯೋಗಳಲ್ಲಿ, ರಿಂಕು ಸೊಗಸಾದ ಶೆರ್ವಾನಿಯನ್ನು ಧರಿಸಿದ್ದರೆ, ಪ್ರಿಯಾ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ.
ಇವರಿಬ್ಬರೂ ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದರು ಎಂಬ ವದಂತಿ ಹಬ್ಬಿತ್ತು. ಈ ವರ್ಷದ ಆರಂಭದಿಂದಲೂ ಅವರ ಬಾಂಧವ್ಯದ ಬಗ್ಗೆ ಊಹಾಪೋಹಗಳು ಹಬ್ಬಿತ್ತು. ತದ ನಂತರ ಪ್ರಿಯಾಳ ತಂದೆ ಇದನ್ನು ದೃಢಪಡಿಸಿದ್ದರು.
ಸಮಾಜವಾದಿ ಪಕ್ಷದ ಯುವ ಮತ್ತು ಕ್ರಿಯಾಶೀಲ ರಾಜಕಾರಣಿಯಾಗಿರುವ ಪ್ರಿಯಾ ಸರೋಜ್ ಜೌನ್‌ಪುರದ ಮಚ್ಲಿಶಹರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
Advertisement