
ಮುಂಬೈ: ಥಾಣೆ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬಿದ್ದು ಆರು ಪ್ರಯಾಣಿಕರು ಸಾವನ್ನಪ್ಪಿದ ನಂತರ ಎಚ್ತೆತ್ತುಕೊಂಡ ರೈಲ್ವೆ ಸಚಿವಾಲಯ, ಮುಂಬೈ ಸಬರ್ಬನ್‌ಗಾಗಿ ಅಸ್ತಿತ್ವದಲ್ಲಿರುವ ಮತ್ತು ಹೊಸ ಲೋಕಲ್ ರೈಲುಗಳ ಎಲ್ಲಾ ಬೋಗಿಗಳಲ್ಲಿ ಸ್ವಯಂಚಾಲಿತವಾಗಿ ಬಾಗಿಲು ಮುಚ್ಚುವ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸಂಭವಿಸಿದ ದುರಂತದ ನಂತರ, ಮುಂಬೈ ಸಬರ್ಬನ್‌ಗಾಗಿ ತಯಾರಾಗುತ್ತಿರುವ ಎಲ್ಲಾ ಲೋಕಲ್ ರೈಲುಗಳಲ್ಲಿ ಸ್ವಯಂಚಾಲಿತ ಬಾಗಿಲು ಮುಚ್ಚುವ ಸೌಲಭ್ಯ ಕಲ್ಪಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರದ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ಹೇಳಿದ್ದಾರೆ.
ಇದಲ್ಲದೆ, ಪ್ರಸ್ತುತ ಸೇವೆಯಲ್ಲಿರುವ ಎಲ್ಲಾ ರೇಕ್‌ಗಳನ್ನು ಮರುವಿನ್ಯಾಸಗೊಳಿಸಲಾಗುವುದು ಮತ್ತು ಮುಂಬೈ ಸಬರ್ಬನ್‌ನ ಈ ರೇಕ್‌ಗಳಲ್ಲಿ ಬಾಗಿಲು ಮುಚ್ಚುವ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಕುಮಾರ್ ತಿಳಿಸಿದ್ದಾರೆ.
ಸುರಕ್ಷತೆಯು ರೈಲ್ವೆಯ ಪ್ರಮುಖ ಆದ್ಯತೆಯಾಗಿದೆ ಮತ್ತು ಅಂತಹ ಅಪಘಾತಗಳು ಮರುಕಳಿಸದಂತೆ ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಒತ್ತಿ ಹೇಳಿದರು.
ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಇಂದು ಬೆಳಗಿನ ಜನದಟ್ಟಣೆಯ ಸಮಯದಲ್ಲಿ ವಿರುದ್ಧ ದಿಕ್ಕುಗಳಲ್ಲಿ ಚಲಿಸುವ ಎರಡು ರೈಲುಗಳ ಫುಟ್‌ಬೋರ್ಡ್‌ಗಳಲ್ಲಿ ನಿಂತಿದ್ದ ಪ್ರಯಾಣಿಕರ ಬ್ಯಾಗ್ ಗಳು ಪರಸ್ಪರ ತಗುಲಿ ಹಳಿಗಳ ಮೇಲೆ ಬಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
Advertisement