
ಮುಂಬೈ: ಚುನಾವಣಾ ಆಯೋಗವನ್ನು(ಇಸಿ) ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು, ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳು ಎತ್ತಿರುವ ಅನುಮಾನಗಳನ್ನು ನಿವಾರಿಸಲು ಚುನಾವಣಾ ಆಯೋಗ, ಆಡಳಿತಾರೂಢ ಬಿಜೆಪಿ ಜತೆ "ಒಪ್ಪಂದ" ಮಾಡಿಕೊಂಡಿದೆಯೇ? ಎಂದು ಪ್ರಶ್ನಿಸಿದ್ದಾರೆ.
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ "ಮ್ಯಾಚ್ ಫಿಕ್ಸಿಂಗ್" ಮತ್ತು "ರಿಗ್ಗಿಂಗ್" ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪವನ್ನು ಪ್ರಶ್ನಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾನುವಾರ ಪತ್ರಿಕೆಯಲ್ಲಿ ಲೇಖನ ಬರೆದ ನಂತರ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಫಡ್ನವೀಸ್ ತಮ್ಮ ಲೇಖನದಲ್ಲಿ, ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ಜನಾದೇಶವನ್ನು ನಿರಂತರವಾಗಿ "ಅವಮಾನಿಸುತ್ತಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.
"ರಾಹುಲ್ ಗಾಂಧಿ ಅವರು ಬಿಜೆಪಿಗೆ ಪ್ರಶ್ನೆಗಳನ್ನು ಕೇಳಿಲ್ಲ, ಚುನಾವಣಾ ಆಯೋಗಕ್ಕೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ದೇವೇಂದ್ರ ಫಡ್ನವಿಸ್ ಏಕೆ ಪ್ರತಿಕ್ರಿಯಿಸಬೇಕು? ಚುನಾವಣಾ ಆಯೋಗವು, ಬಿಜೆಪಿಗೆ ತನ್ನ ಮುಖದ ಮೇಲಿನ ಧೂಳನ್ನು ಒರೆಸಲು ಮತ್ತು ಅದರ ಕಾರ್ಯನಿರ್ವಹಣೆಯ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸಲು ಒಪ್ಪಂದ ಮಾಡಿಕೊಂಡಿದೆಯೇ?" ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಈ ವಿಷಯವು ಕೇವಲ ಚುನಾವಣೆಗಳ ಬಗ್ಗೆ ಅಲ್ಲ, ಕಳೆದ ಹತ್ತು ವರ್ಷಗಳಲ್ಲಿ ಚುನಾವಣಾ ಆಯೋಗದ ನಡವಳಿಕೆಯ ಬಗ್ಗೆ ಎಂದು ರಾವತ್ ಹೇಳಿದರು.
"ಶಿವಸೇನೆ ವಿಭಜನೆಗೆ ಕಾರಣವಾದ ಚುನಾವಣಾ ಆಯೋಗಯು, ಅದರ ಸ್ಥಾಪಕ ಶರದ್ ಪವಾರ್ ಇನ್ನೂ ಇರುವಾಗಲೇ ಎನ್‌ಸಿಪಿಯನ್ನು ಅಜಿತ್ ಪವಾರ್ ಅವರಿಗೆ ಹಸ್ತಾಂತರಿಸಿತು. ಇದೆಲ್ಲವನ್ನೂ ಕೇಂದ್ರ ಸಚಿವ ಅಮಿತ್ ಶಾ ಅವರ ಒತ್ತಡದ ಮೇರೆಗೆ ಚುನಾವಣೆ ಗೆಲ್ಲಲು ಮಾಡಲಾಯಿತು. ಚುನಾವಣಾ ಆಯೋಗವು ಈ ಪ್ರಶ್ನೆಗಳಿಗೆ ಸಹ ಉತ್ತರಿಸಬೇಕಾಗುತ್ತದೆ" ಎಂದು ರಾವತ್ ಪ್ರತಿಪಾದಿಸಿದ್ದಾರೆ.
ಚುನಾವಣಾ ಆಯೋಗವು ಪಂಜರದ ಗಿಣಿಯಾಗಿದ್ದು, ಅದು ತನ್ನ ಆತ್ಮವನ್ನು ಮಾರಿ ಬಿಜೆಪಿಯ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾವತ್ ಟೀಕಿಸಿದ್ದಾರೆ.
Advertisement