
ಕತ್ರಾ: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಚಾಲನೆ ನೀಡಿದ 'ವಂದೇ ಭಾರತ್' ರೈಲಿನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರುಕ್ ಅಬ್ದುಲ್ಲಾ ಇಂದು ಪ್ರಯಾಣಿಸಿದರು.
ಶ್ರೀನಗರದ ನೌಗಮ್ ರೈಲು ನಿಲ್ದಾಣದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ರೈಲು ನಿಲ್ದಾಣದವರೆಗೂ ವಂದೇ ಭಾರತ್ ರೈಲಿನಲ್ಲಿ ತೆರಳಿದ ಫಾರೂಕ್ ಅಬ್ದುಲ್ಲಾ, ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಉದಮ್‌ಪುರ-ಶ್ರೀನಗರ-ಬಾರಾಮುಲ್ಲಾ ಮಾರ್ಗದ ವಂದೇ ಭಾರತ್ ರೈಲುಗಳು ಜಮ್ಮು ಮತ್ತು ಕಾಶ್ಮೀರದ ಜನರಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಏಕೆಂದರೆ ಇದು, ಇಡೀ ದೇಶದೊಂದಿಗೆ ಕೇಂದ್ರಾಡಳಿತ ಪ್ರದೇಶವನ್ನು ಸಂಪರ್ಕಿಸುತ್ತದೆ ಎಂದು ಹೇಳಿದರು.
ರೈಲು ಚೆನಾಬ್ ಸೇತುವೆ ದಾಟುತ್ತಿದ್ದಂತೆಯೇ ನನ್ನ ಕಣ್ಣಲ್ಲಿ ನೀರು ಬಂತು ಎಂದು ಅವರು ತಿಳಿಸಿದರು. ಈ ಸೇತುವೆ ಇಡೀ ವಿಶ್ವದಲ್ಲಿಯೇ ಅತ್ಯಂತ ಉದ್ದವಾದ ರೈಲ್ವೆ ಸೇತುವೆಯಾಗಿದೆ. ಇದು ಭಾರತೀಯ ರೈಲ್ವೆಯ ಒಂದು ಮೈಲಿಗಲ್ಲು ಯೋಜನೆಯಾಗಿದ್ದು, ಕಣಿವೆಗಳಿಂದ ಕೂಡಿದ ಭೂಪ್ರದೇಶದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಯೋಜನೆ ಪೂರ್ಣಗೊಳಿಸಲಾಗಿದೆ. ಇದು ಕಾಶ್ಮೀರವನ್ನು ಜಮ್ಮು ಮತ್ತು ಇಡೀ ದೇಶಕ್ಕೆ ರೈಲಿನ ಮೂಲಕ ಸಂಪರ್ಕಿಸುತ್ತದೆ.
ಅಂತಿಮವಾಗಿ ಕಾಶ್ಮೀರದಿಂದ ರೈಲಿನಲ್ಲಿ ದೇಶಕ್ಕೆ ಪ್ರಯಾಣಿಸುವ ದಿನ ಬಂದಿದೆ, ಈ ಸೇತುವೆ ನಿರ್ಮಿಸಿದ ಎಲ್ಲಾ ಕಾರ್ಮಿಕರು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಫಾರುಕ್ ಅಬ್ದುಲ್ಲಾ ಹೇಳಿದರು.
Advertisement