
ನವದೆಹಲಿ: 2025 ರಲ್ಲಿ ಭಾರತದ ಜನಸಂಖ್ಯೆಯು 1.46 ಶತಕೋಟಿ ತಲುಪುವ ಅಂದಾಜಿದ್ದು, ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶವಾಗಿದೆ ಎಂದು ವಿಶ್ವಸಂಸ್ಥೆಯ ಹೊಸ ಜನಸಂಖ್ಯಾ ವರದಿ ತಿಳಿಸಿದೆ. ಆದರೆ ಭಾರತ ಒಟ್ಟು ಜನನ ಪ್ರಮಾಣ ದರ ಮಾತ್ರ ಮರಣ ಪ್ರಮಾಣಕ್ಕಿಂತ ಕಡಿಮೆಯಾಗಿದೆ ಎಂದು ವರದಿ ಬಹಿರಂಗಪಡಿಸಿದೆ.
UNFPA ಯ 2025 ರ ವಿಶ್ವ ಜನಸಂಖ್ಯಾ ಸ್ಥಿತಿ(SOWP) ವರದಿ, ದಿ ರಿಯಲ್ ಫರ್ಟಿಲಿಟಿ ಕ್ರೈಸಿಸ್, ಸಂತಾನೋತ್ಪತ್ತಿ ಗುರಿಗಳನ್ನು ಪರಿಹರಿಸುವತ್ತ ಸಾಗಲು ಕರೆ ನೀಡಿದೆ ಮತ್ತು ಲಕ್ಷಾಂತರ ಜನ ತಮ್ಮ ನಿಜವಾದ ಫರ್ಟಿಲಿಟಿ ಗುರಿ ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಪಾದಿಸಿದೆ.
ಈ ವರದಿಯು ಜನಸಂಖ್ಯಾ ಸಂಯೋಜನೆ, ಫಲವತ್ತತೆ ಮತ್ತು ಜೀವಿತಾವಧಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಬಹಿರಂಗಪಡಿಸುತ್ತದೆ ಮತ್ತು ಇದು ಪ್ರಮುಖ ಜನಸಂಖ್ಯಾ ಪರಿವರ್ತನೆಯನ್ನು ಸೂಚಿಸುತ್ತದೆ.
ಭಾರತದ ಒಟ್ಟು ಫಲವತ್ತತೆ ದರವು ಪ್ರತಿ ಮಹಿಳೆಗೆ 1.9 ಜನನ ಪ್ರಮಾಣಕ್ಕೆ ಇಳಿದಿದೆ. ಇದು 2.1 ರ ಮರಣ ಪ್ರಮಾಣಕ್ಕಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಇದರರ್ಥ, ಸರಾಸರಿಯಾಗಿ, ಭಾರತೀಯ ಮಹಿಳೆಯರು, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಜನಸಂಖ್ಯೆಯ ಗಾತ್ರವನ್ನು ಕಾಪಾಡಿಕೊಳ್ಳಲು ಅಗತ್ಯಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದ್ದಾರೆ.
ಜನನ ಪ್ರಮಾಣ ನಿಧಾನವಾಗುತ್ತಿದ್ದರೂ, ಭಾರತದ ಯುವ ಜನಸಂಖ್ಯೆಯು ಗಮನಾರ್ಹವಾಗಿ ಉಳಿದಿದೆ. 14 ವರ್ಷದೊಳಗಿನವರ ಸಂಖ್ಯೆ ಶೇ. 24, 10 ರಿಂದ 19 ವರ್ಷದವರು ಶೇ. 17 ಮತ್ತು 10 ರಿಂದ 24 ವರ್ಷದವರು ಶೇ. 26 ರಷ್ಟಿದ್ದಾರೆ.
ದೇಶದ ಜನಸಂಖ್ಯೆಯ ಶೇ. 68 ರಷ್ಟು ಜನ ಕೆಲಸ ಮಾಡುವ ವಯಸ್ಸಿನವರಾಗಿದ್ದಾರೆ(15-64), ಇದು ಸಾಕಷ್ಟು ಉದ್ಯೋಗ ಮತ್ತು ನೀತಿ ಬೆಂಬಲದೊಂದಿಗೆ ಹೊಂದಿಕೆಯಾದರೆ ಸಂಭಾವ್ಯ ಜನಸಂಖ್ಯಾ ಲಾಭಾಂಶವನ್ನು ಒದಗಿಸುತ್ತಿದೆ.
ಇನ್ನು ವಯಸ್ಸಾದ ಜನಸಂಖ್ಯೆ (65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಪ್ರಸ್ತುತ ಶೇ. 7 ರಷ್ಟಿದ್ದು, ಜೀವಿತಾವಧಿ ಸುಧಾರಿಸಿದಂತೆ ಮುಂಬರುವ ದಶಕಗಳಲ್ಲಿ ಇದು ಹೆಚ್ಚಾಗುವ ನಿರೀಕ್ಷೆಯಿದೆ. 2025 ರ ಹೊತ್ತಿಗೆ ಜೀವಿತಾವಧಿ ಪುರುಷರಿಗೆ 71 ವರ್ಷಗಳು ಮತ್ತು ಮಹಿಳೆಯರಿಗೆ 74 ವರ್ಷಗಳು ಎಂದು ಅಂದಾಜಿಸಲಾಗಿದೆ.
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಭಾರತದ ಪ್ರಸ್ತುತ ಜನಸಂಖ್ಯೆ 1,463.9 ಮಿಲಿಯನ್ ಇದ್ದು, ಭಾರತ ಈಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಜನಸಂಖ್ಯೆ ಕುಸಿಯಲು ಪ್ರಾರಂಭವಾಗುವ ಮೊದಲು ಅಂದರೆ ಸುಮಾರು 40 ವರ್ಷಗಳ ನಂತರ ಈ ಸಂಖ್ಯೆ ಸುಮಾರು 1.7 ಶತಕೋಟಿಯಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
ಈ ಸಂಖ್ಯೆಗಳ ಹಿಂದೆ ತಮ್ಮ ಕುಟುಂಬವನ್ನು ವಿಸ್ತರಿಸಲು ನಿರ್ಧರಿಸಿದ ಲಕ್ಷಾಂತರ ದಂಪತಿಗಳ ಕಥೆಗಳು ಮತ್ತು ಅವರು ಯಾವಾಗ ಅಥವಾ ಎಷ್ಟು ಬಾರಿ ಗರ್ಭಿಣಿಯಾಗುತ್ತಾರೆಯೇ ಎಂಬುದರ ಬಗ್ಗೆ ಕಡಿಮೆ ಆಯ್ಕೆಗಳನ್ನು ಹೊಂದಿದ್ದ ಮಹಿಳೆಯರ ಕಥೆಗಳಿವೆ ಎಂದು ವರದಿ ಹೇಳಿದೆ.
1960 ರಲ್ಲಿ, ಭಾರತದ ಜನಸಂಖ್ಯೆಯು ಸುಮಾರು 436 ಮಿಲಿಯನ್ ಆಗಿದ್ದಾಗ, ಮಹಿಳೆ ಸರಾಸರಿ ಸುಮಾರು ಆರು ಮಕ್ಕಳನ್ನು ಹೊಂದಿದ್ದರು. ಆಗ, ಮಹಿಳೆಯರು ತಮ್ಮ ದೇಹ ಮತ್ತು ಜೀವನದ ಮೇಲೆ ಇಂದಿನಂತೆ ಕಡಿಮೆ ನಿಯಂತ್ರಣ ಹೊಂದಿದ್ದರು. 4 ರಲ್ಲಿ ಒಬ್ಬರು ಮಾತ್ರ ಕೆಲವು ರೀತಿಯ ಗರ್ಭನಿರೋಧಕಗಳನ್ನು ಬಳಸುತ್ತಿದ್ದರು ಮತ್ತು ಇಬ್ಬರಲ್ಲಿ ಒಬ್ಬರು ಮಾತ್ರ ಪ್ರಾಥಮಿಕ ಶಾಲೆಗೆ ಹೋಗಿದ್ದರು(ವಿಶ್ವಬ್ಯಾಂಕ್ ಡೇಟಾ, 2020) ಎಂದು ವರದಿ ತಿಳಿಸಿದೆ.
Advertisement