
ಅಹಮದಾಬಾದ್: ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿ ಸುಮಾರು 1.25 ಲಕ್ಷ ಲೀಟರ್ ಇಂಧನವಿತ್ತು. ಮಧ್ಯಾಹ್ನ ಹೆಚ್ಚಿನ ತಾಪಮಾನದಿಂದಾಗಿ ಪ್ರಯಾಣಿಕರನ್ನು ರಕ್ಷಿಸುವ ಅವಕಾಶವಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ಏರ್ ಇಂಡಿಯಾ ವಿಮಾನ ಪತನವಾದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಮತ್ತು ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಘಟನೆಯಿಂದ ಇಡೀ ರಾಷ್ಟ್ರವು ದುಃಖದಲ್ಲಿದ್ದು ಮೃತರ ಕುಟುಂಬಗಳೊಂದಿಗೆ ನಿಂತಿದೆ. ಅಪಘಾತದ ನಡೆದ 10 ನಿಮಿಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಿಕ್ಕಿತು ಎಂದು ತಿಳಿಸಿದರು.
ನಾನು ಗುಜರಾತ್ ಮುಖ್ಯಮಂತ್ರಿ ಮತ್ತು ನಾಗರಿಕ ವಿಮಾನಯಾನ ಸಚಿವರನ್ನು ಸಂಪರ್ಕಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸ್ವಲ್ಪ ಸಮಯದಲ್ಲೇ ಕರೆ ಮಾಡಿದ್ದಾರೆ. ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ದುರಂತ ನಡೆದ ಸ್ಥಳಕ್ಕೆ ನಾನು ಹೋಗಿದ್ದೆ. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಒಬ್ಬರು ದುರಂತದಿಂದ ಪಾರಾಗಿದ್ದು, ಡಿಎನ್ಎ ಪರಿಶೀಲನೆಯ ನಂತರ ಸಾವಿನ ಸಂಖ್ಯೆಯನ್ನು ಘೋಷಿಸಲಾಗುವುದು ಎಂದು ಹೇಳಿದರು.
ನಾನು ಬದುಕುಳಿದ ಓರ್ವ ಪ್ರಯಾಣಿಕನನ್ನು ಭೇಟಿಯಾದೆ. ಪ್ರತಿಯೊಂದು ಇಲಾಖೆಯು ಸಮನ್ವಯದಿಂದ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಮೃತ ದೇಹಗಳ ಮರುಪಡೆಯುವಿಕೆ ಬಹುತೇಕ ಪೂರ್ಣಗೊಂಡಿದೆ. ಕುಟುಂಬ ಸದಸ್ಯರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ವಿದೇಶಗಳಲ್ಲಿರುವ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಲಾಗಿದೆ. ಸುಮಾರು 1000 ಡಿಎನ್ಎ ಪರೀಕ್ಷೆಗಳನ್ನು ಮಾಡಲಾಗುವುದು ಎಂದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಅಮಿತ್ ಶಾ ಅವರಿಗೆ ಸಾಥ್ ನೀಡಿದರು. ಇದೇ ವೇಳೆ ಅಮಿತ್ ಶಾ, ವಿಮಾನ ದುರಂತ ಒಂದು ದುರಾದುಷ್ಟಕರ. ಅಪಘಾತದಲ್ಲಿ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಆ ಬಗ್ಗೆ ನಿಖರ ಸಂಖ್ಯೆ ಹೇಳಲು ಈಗ ಸಾಧ್ಯವಿಲ್ಲ. ಡಿಎನ್ಎ ಪರೀಕ್ಷೆಯ ಬಳಿಕವೇ ನಿಖರವಾದ ಸಾವಿನ ಸಂಖ್ಯೆ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ದುರಂತಕ್ಕೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತ ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕ ಘಟನೆ. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಬಗ್ಗೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement