
ಅಹಮದಾಬಾದ್ ವಿಮಾನ ಪತನದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಟಾಟಾ ಗ್ರೂಪ್ ಘೋಷಿಸಿದೆ. ಅಲ್ಲದೆ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸಹ ಭರಿಸುತ್ತೇವೆ ಎಂದು Tata Group ಹೇಳಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಅವರಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲ ಸಿಗುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದರ ಹೊರತಾಗಿಯೂ ಬಿಜೆ ಮೆಡಿಕಲ್‌ನ ಹಾಸ್ಟೆಲ್ ನಿರ್ಮಾಣಕ್ಕೂ ನಾವು ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಗುಜರಾತ್ ರಾಜಧಾನಿ ಅಹಮದಾಬಾದ್ ಏರ್ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿದೆ. ಏರ್ಪೋರ್ಟ್ ಬಳಿ ಮೇಧಿನಿ ನಗರ್ನಲ್ಲಿ ಈ ಘಟನೆ ಸಂಭವಿಸಿದ್ದು ಬೋಯಿಂಗ್ 787-8 ಡ್ರೀಮ್‌ಲೈನರ್ (AI-171) ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರೊಂದಿಗೆ ಲಂಡನ್‌ಗೆ ತೆರಳುತ್ತಿತ್ತು ಎನ್ನಲಾಗಿದೆ. ವಿಮಾನವು ನಗರದ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಫೋರೆನ್ಸಿಕ್ ಕ್ರಾಸ್ ರಸ್ತೆಯ ಬಳಿ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಮೇಲೆ ಬಿದ್ದಿದೆ.
246 ಮಂದಿ ಸಾವು
ಈ ದುರಂತದಲ್ಲಿ ಒಟ್ಟು 246 ಮಂದಿ ಸಾವಿಗೀಡಾಗಿದ್ದು, ಈ ಪೈಕಿ 229 ವಿಮಾನ ಪ್ರಯಾಣಿಕರು, 10 ಮಂದಿ ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ ( ಮುಖ್ಯ ಪೈಲಟ ಸುಮಿತ್ ಸಭರ್ವಾಲ್ ಮತ್ತು ಕೋ ಪೈಲಟ್ ಕ್ಲೈವ್ ಕುಂದರ್) ಗಳು ಸೇರಿದ್ದರು. ವಿಮಾನದಲ್ಲಿದ್ದ 242 ಜನರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು ಎಂದು ತಿಳಿದುಬಂದಿದೆ. ಇದಲ್ಲದೆ ವಿಮಾನ ಢಿಕ್ಕಿಯಾದ ಬಿಜೆ ವೈದ್ಯಕೀಯ ಕಾಲೇಜಿನ 5 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ. ದುರಂತ ನಡೆದ ಸಂದರ್ಭದಲ್ಲಿ ವಿಮಾನ ಕೇವಲ 825 ಅಡಿ ಎತ್ತರದಲ್ಲಿತ್ತು ಎನ್ನಲಾಗಿದೆ.
ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ನಿಧನ
ಇದೇ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ರೂಪಾನಿ ಅವರು ಕುಟುಂಬ ಸದಸ್ಯರ ಭೇಟಿ ಮಾಡಲು ಲಂಡನ್ ತೆರಳುತಿದ್ದರು ಎಂದು ತಿಳಿದುಬಂದಿದೆ.
Advertisement