
ನವದೆಹಲಿ: ಜೂನ್ 12 ರಂದು ಮಧ್ಯಾಹ್ನ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ದುರಂತದಂತಹ ವಿಪತ್ತುಗಳು ಭವಿಷ್ಯದಲ್ಲಿ ಸಂಭವಿಸದಂತೆ ನೋಡಿಕೊಳ್ಳಲು ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ, ಬಹು-ಶಿಸ್ತಿನ ಸಮಿತಿಯನ್ನು ರಚಿಸುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ (MoCA) ಶನಿವಾರ ಪ್ರಕಟಿಸಿದೆ.
ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ಮತ್ತು ಅವು ಸಂಭವಿಸಿದ ಸಂದರ್ಭಗಳಲ್ಲಿ ಅವುಗಳನ್ನು ನಿರ್ವಹಿಸುವ ವಿಧಾನಕ್ಕಾಗಿ ತಂಡವು ಶಿಷ್ಟಾಚಾರ(SOP)ಗಳನ್ನು ರೂಪಿಸುತ್ತದೆ. ಕಾರ್ಯವನ್ನು ಪೂರ್ಣಗೊಳಿಸಲು ಸಚಿವಾಲಯ ಮೂರು ತಿಂಗಳ ಗಡುವನ್ನು ನೀಡಿದೆ.
ಸಚಿವಾಲಯವು ಇಂದು ನಸುಕಿನ ಜಾವ ಹೊರಡಿಸಿದ ಆದೇಶದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಪ್ರತಿನಿಧಿಗಳನ್ನು ಸಮಿತಿಯು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಸಂಬಂಧಿತ ಸಂಸ್ಥೆಗಳು ನಡೆಸುವ ಇತರ ವಿಚಾರಣೆಗಳಿಗೆ ಸಮಿತಿಯು ಪರ್ಯಾಯವಾಗಿರುವುದಿಲ್ಲ. ಆದರೆ ಭವಿಷ್ಯದಲ್ಲಿ ಅಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಶಿಷ್ಠಾಚಾರಗಳನ್ನು ರೂಪಿಸುವತ್ತ ಗಮನಹರಿಸುತ್ತದೆ ಎಂದು ಅದು ಹೇಳಿದೆ.
ಸಮಿತಿಯು ಅಪಘಾತದ ಮೂಲ ಕಾರಣವನ್ನು ವಿಶ್ಲೇಷಿಸುತ್ತದೆ. ಯಾಂತ್ರಿಕ ವೈಫಲ್ಯ, ಮಾನವ ದೋಷ, ಹವಾಮಾನ ಪರಿಸ್ಥಿತಿಗಳು, ನಿಯಂತ್ರಕ ಅನುಸರಣೆಗಳು ಮತ್ತು ಇತರ ಕಾರಣಗಳು ಸೇರಿದಂತೆ ಅಪಘಾತಕ್ಕೆ ಕಾರಣವಾಗುವ ಅಂಶಗಳನ್ನು ಇದು ನಿರ್ಣಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಹಮದಾಬಾದ್‌ನಿಂದ ಲಂಡನ್ ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ AI 171 ವಿಮಾನ ಹಾರಿದ ತಕ್ಷಣ ಅಪಘಾತಕ್ಕೀಡಾಗಿ ಸುಮಾರು 260 ಪ್ರಯಾಣಿಕರು ಮೃತಪಟ್ಟಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಇದು ಅಗತ್ಯ ಸುಧಾರಣೆಗಳನ್ನು ಶಿಫಾರಸು ಮಾಡುತ್ತದೆ ಮತ್ತು ಶಿಷ್ಟಾಚಾರಗಳನ್ನು ರೂಪಿಸುತ್ತದೆ. ಅಂತಹ ಘಟನೆಗಳನ್ನು ತಡೆಗಟ್ಟುವ ಮತ್ತು ನಿರ್ವಹಿಸುವ ಕುರಿತು ಅತ್ಯುತ್ತಮ ಅಂತಾರಾಷ್ಟ್ರೀಯ ಅಭ್ಯಾಸಗಳನ್ನು SOP ಒಳಗೊಂಡಿರುತ್ತದೆ.
ಸಮಿತಿಯು, ಇಂತಹ ಅಪಘಾತ ಸಂದರ್ಭಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರ ವಿವಿಧ ಪಾಲುದಾರರಿಂದ ತುರ್ತು ಪ್ರತಿಕ್ರಿಯೆಯನ್ನು ನಿರ್ಣಯಿಸುತ್ತದೆ, ಅವುಗಳ ನಡುವೆ ರಕ್ಷಣಾ ಕಾರ್ಯಾಚರಣೆಗಳು ಮತ್ತು ಸಮನ್ವಯ ಸೇರಿದಂತೆ ಹಿಂದಿನ ವಿಮಾನ ಘಟನೆಗಳನ್ನು ಪರಿಶೀಲಿಸುತ್ತದೆ.ಅಪಘಾತದ ನಂತರದ ಘಟನೆ ನಿರ್ವಹಣೆಯಲ್ಲಿ ಎಲ್ಲಾ ಸಂಸ್ಥೆಗಳು ವಹಿಸಬೇಕಾದ ಪಾತ್ರದ ಕುರಿತು ಸಮಗ್ರ SOP ನ್ನು ರಚಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಘಟನೆಗಳು ಮತ್ತೆ ಸಂಭವಿಸದಂತೆ ತಡೆಗಟ್ಟಲು ನೀತಿ ಬದಲಾವಣೆಗಳು, ಕಾರ್ಯಾಚರಣೆಯ ಸುಧಾರಣೆಗಳು ಮತ್ತು ತರಬೇತಿ ವರ್ಧನೆಗಳನ್ನು ಇದು ಸೂಚಿಸುತ್ತದೆ.
ವಿಮಾನ ಅಂಕಿಅಂಶಗಳು, ಕಾಕ್‌ಪಿಟ್ ಧ್ವನಿ ರೆಕಾರ್ಡರ್‌ಗಳು, ವಿಮಾನ ನಿರ್ವಹಣೆ, ಎಟಿಸಿ ಲಾಗ್ ಮತ್ತು ಸಾಕ್ಷ್ಯಗಳು ಸೇರಿದಂತೆ ಸ್ಥಳ ಪರಿಶೀಲನೆಗಳನ್ನು ನಡೆಸುತ್ತದೆ, ಸಿಬ್ಬಂದಿ, ವಾಯು ಸಂಚಾರ ನಿಯಂತ್ರಣ ಮತ್ತು ಸಂಬಂಧಿತ ಸಿಬ್ಬಂದಿಯನ್ನು ಸಂದರ್ಶಿಸುತ್ತದೆ.
ವಿದೇಶಿ ಪ್ರಜೆಗಳು ಅಥವಾ ವಿಮಾನ ತಯಾರಕರು ಭಾಗಿಯಾಗಿದ್ದರೆ ಅದು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ.
ಸಮಿತಿಯು ಈ ಕೆಳಗಿನ ಸದಸ್ಯರನ್ನು ಹೊಂದಿರುತ್ತದೆ:
ಕೇಂದ್ರ ಗೃಹ ಕಾರ್ಯದರ್ಶಿ, ಗೃಹ ವ್ಯವಹಾರಗಳ ಸಚಿವಾಲಯ (ಅಧ್ಯಕ್ಷರು);
ಕಾರ್ಯದರ್ಶಿ, ನಾಗರಿಕ ವಿಮಾನಯಾನ ಸಚಿವಾಲಯ;
ಜಂಟಿ ಕಾರ್ಯದರ್ಶಿ/ಹೆಚ್ಚುವರಿ ಕಾರ್ಯದರ್ಶಿ, ಗೃಹ ವ್ಯವಹಾರಗಳ ಸಚಿವಾಲಯ;
ಗುಜರಾತ್ ಗೃಹ ಇಲಾಖೆಯ ಪ್ರತಿನಿಧಿ;
ರಾಜ್ಯ ವಿಪತ್ತು ಪ್ರತಿಕ್ರಿಯೆ ಪ್ರಾಧಿಕಾರ, ಗುಜರಾತ್‌ನ ಪ್ರತಿನಿಧಿ;
ಪೊಲೀಸ್ ಆಯುಕ್ತರು, ಅಹಮದಾಬಾದ್;
ಭಾರತೀಯ ವಾಯುಪಡೆಯ ಮಹಾನಿರ್ದೇಶಕರು, ತಪಾಸಣೆ ಮತ್ತು ಸುರಕ್ಷತೆ.
ನಾಗರಿಕ ವಿಮಾನಯಾನ ಮತ್ತು ಭದ್ರತಾ ಬ್ಯೂರೋದ ಮಹಾನಿರ್ದೇಶಕರು, ನಾಗರಿಕ ವಿಮಾನಯಾನ ಮತ್ತು ಭದ್ರತಾ ಬ್ಯೂರೋ
ನಾಗರಿಕ ವಿಮಾನಯಾನ ಮಹಾನಿರ್ದೇಶಕರು;
ವಿಶೇಷ ನಿರ್ದೇಶಕರು, ಐಬಿ
ವಿಧಿ ವಿಜ್ಞಾನ ಸೇವೆಗಳ ನಿರ್ದೇಶನಾಲಯ ನಿರ್ದೇಶಕರು;
ವಾಯುಯಾನ ತಜ್ಞರು, ಅಪಘಾತ ತನಿಖಾಧಿಕಾರಿಗಳು ಮತ್ತು ಕಾನೂನು ಸಲಹೆಗಾರರಂತಹ ಸಮಿತಿಯು ಸೂಕ್ತವೆಂದು ಪರಿಗಣಿಸುವ ಇತರ ಸದಸ್ಯರು.
Advertisement