
ಅಹಮದಾಬಾದ್: ಅಹಮದಾಬಾದ್ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಏರ್ ಇಂಡಿಯಾ ವಿಮಾನ ಪತನದ ದುರದೃಷ್ಟಕರ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದ 17 ವರ್ಷದ ಬಾಲಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಅಹಮದಾಬಾದ್ ಅಪರಾಧ ವಿಭಾಗ, ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ವಿಡಿಯೋ ಮಾಡಿದ ಬಾಲಕನ ಹೇಳಿಕೆಯನ್ನು ಸಾಕ್ಷಿಯಾಗಿ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.
ಏರ್ ಇಂಡಿಯಾ ವಿಮಾನ ಕಳೆದ ಗುರುವಾರ ಅತ್ಯಂತ ಕೆಟ್ಟ ದುರಂತಗಳಲ್ಲಿ ಒಂದಾಗಿ ಇತಿಹಾಸದಲ್ಲಿ ದಾಖಲಾಗುವ ಕೆಲವೇ ಕ್ಷಣಗಳ ಮುನ್ನ ಆರ್ಯನ್ ಎಂಬ ಬಾಲಕ ಅದರ ವಿಡಿಯೋ ಮಾಡಿದ್ದು, ವಿಡಿಯೋ ಮಾಡುವುದು ಹವ್ಯಾಸವಾಗಿತ್ತು.
ವಿಡಿಯೋಗೆ ಸಂಬಂಧಿಸಿದಂತೆ ಬಾಲಕನನ್ನು ಬಂಧಿಸಲಾಗಿದೆ ಎಂಬ ಊಹಾಪೋಹಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ.
"ಈ ವಿಡಿಯೋ ಮಾಡಿದ್ದಕ್ಕಾಗಿ ಯಾರನ್ನೂ ಬಂಧಿಸಲಾಗಿಲ್ಲ. ಮೊಬೈಲ್ ವಿಡಿಯೋದ ಸ್ಕ್ರೀನ್ ರೆಕಾರ್ಡಿಂಗ್ ವೈರಲ್ ಆಗಿದೆ. ವಿಡಿಯೋ ತೆಗೆದ ಅಪ್ರಾಪ್ತ ಬಾಲಕ ಪೊಲೀಸರಿಗೆ ವಿಡಿಯೋದ ವಿವರಗಳನ್ನು ನೀಡಿದ್ದಾನೆ. ಸಾಕ್ಷಿಯಾಗಿ ಹೇಳಿಕೆ ನೀಡಲು ಆತನ ತಂದೆಯೊಂದಿಗೆ ಬಂದಿದ್ದು, ನಂತರ ಆತನನ್ನು ಆತನ ತಂದೆಯೊಂದಿಗೆ ಕಳುಹಿಸಲಾಯಿತು. ಯಾರನ್ನೂ ಬಂಧಿಸಿಲ್ಲ" ಎಂದು ಅಪರಾಧ ಶಾಖೆ ತಿಳಿಸಿದೆ.
ವರದಿಗಾರರೊಂದಿಗೆ ಮಾತನಾಡಿದ ಆರ್ಯನ್, ರೆಕಾರ್ಡ್ ಮಾಡಲು ಪ್ರಾರಂಭಿಸಿದ 24 ಸೆಕೆಂಡುಗಳ ನಂತರ ವಿಮಾನ ಅಪಘಾತ ಸಂಭವಿಸಿತು ಎಂದು ಹೇಳಿದ್ದಾನೆ.
"ನಾನು ಕಣ್ಣಾರೆ ಕಂಡ ಕಾರಣ ನನಗೆ ತುಂಬಾ ಭಯವಾಯಿತು. ನನ್ನ ವಿಡಿಯೋವನ್ನು ಮೊದಲು ನನ್ನ ಸಹೋದರಿ ನೋಡಿದವಳು. ನಂತರ ಆಕೆ ನನ್ನ ತಂದೆಗೆ ತಿಳಿಸಿದಳು. ವಿಮಾನ ಅಪಘಾತಕ್ಕೀಡಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ" ಎಂದು ಆರ್ಯನ್ ಹೇಳಿದ್ದಾನೆ.
ವಿಡಿಯೋ ಮಾಡಿದ ನಂತರ ಆರ್ಯನ್ ತುಂಬಾ ಭಯಭೀತನಾಗಿದ್ದನು. ಈ ಪ್ರದೇಶ ಅಪಾಯಕಾರಿಯಾಗಿ ಪರಿಣಮಿಸಿರುವುದರಿಂದ ಅಲ್ಲಿ ವಾಸಿಸಲು ಬಯಸುವುದಿಲ್ಲ ಎಂದು ಆತನ ಸಹೋದರಿ ಹೇಳಿದ್ದಾರೆ.
ಅಪಘಾತದ ನಂತರ ಆರ್ಯನ್ ದುಃಖದಿಂದ ರಾತ್ರಿಯಿಡೀ ಎಚ್ಚರವಾಗಿದ್ದನು ಮತ್ತು ಏನನ್ನೂ ತಿನ್ನಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಜನರನ್ನು ಹೊತ್ತ ಬೋಯಿಂಗ್ 787 ಡ್ರೀಮ್‌ಲೈನರ್(AI 171) ವಿಮಾನ ಗುರುವಾರ ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರ ಪ್ರದೇಶದ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು.
ಈ ದುರಂತದಲ್ಲಿ ಒಬ್ಬ ಪ್ರಯಾಣಿಕ ಹೊರತುಪಡಿಸಿ ಉಳಿದ ಎಲ್ಲಾ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 270ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
Advertisement