
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಕಳೆದ ವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದ ನಂತರ ಚಲನಚಿತ್ರ ನಿರ್ಮಾಪಕರೊಬ್ಬರು ನಾಪತ್ತೆಯಾಗಿದ್ದು, ಅವರ ಕುಟುಂಬವು ಡಿಎನ್‌ಎ ಮಾದರಿಗಳನ್ನು ನೀಡಿದೆ ಮತ್ತು ಅವರ ಮೊಬೈಲ್ ಫೋನ್ ನೆಟ್ ವರ್ಕ್ ಅಪಘಾತ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿ ಕೊನೆಯದಾಗಿ ಪತ್ತೆಯಾಗಿದೆ.
ಜೂನ್ 12 ರಂದು ಮಧ್ಯಾಹ್ನ 1:39 ಕ್ಕೆ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರದ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಅಪ್ಪಳಿಸಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 242 ಜನರಲ್ಲಿ 241 ಜನ ಮತ್ತು ಕೆಳಗಡೆ ಇದ್ದ 29 ಜನ ಸಾವನ್ನಪ್ಪಿದರು.
ನರೋಡಾ ನಿವಾಸಿ, ಸಂಗೀತ ಆಲ್ಬಮ್‌ಗಳ ನಿರ್ದೇಶಕಾರಿಗಿದ್ದ ಮಹೇಶ್ ಕಲಾವಾಡಿಯಾ ಅವರು ಅಂದು ಮಧ್ಯಾಹ್ನ ಲಾ ಗಾರ್ಡನ್ ಪ್ರದೇಶದಲ್ಲಿ ಯಾರನ್ನಾದರೂ ಭೇಟಿಯಾಗಲು ಹೋಗಿರಬಹುದು ಎಂದು ಅವರ ಪತ್ನಿ ಹೇತಲ್ ಹೇಳಿದ್ದಾರೆ.
"ನನ್ನ ಪತಿ ಮಧ್ಯಾಹ್ನ 1:14 ಕ್ಕೆ ನನಗೆ ಕರೆ ಮಾಡಿ ತಮ್ಮ ಸಭೆ ಮುಗಿದಿದೆ ಮತ್ತು ಮನೆಗೆ ಬರುತ್ತಿರುವುದಾಗಿ ಹೇಳಿದ್ದರು. ಆದರೆ, ಅವರು ಹಿಂತಿರುಗದಿದ್ದಾಗ, ನಾನು ಅವರ ಫೋನ್‌ಗೆ ಕರೆ ಮಾಡಿದೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರ ಮೊಬೈಲ್ ಫೋನ್‌ನ ಕೊನೆಯ ಸ್ಥಳವು ಅಪಘಾತದ ಸ್ಥಳದಿಂದ 700 ಮೀಟರ್ ದೂರದಲ್ಲಿ ತೋರಿಸಿದೆ" ಎಂದು ಅವರು ಹೇಳಿದ್ದಾರೆ.
"ಅವರ ಫೋನ್ ಮಧ್ಯಾಹ್ನ 1:40 ರ ಸುಮಾರಿಗೆ ಸ್ವಿಚ್ ಆಫ್ ಆಗಿತ್ತು. ಅವರ ಸ್ಕೂಟರ್ ಮತ್ತು ಮೊಬೈಲ್ ಫೋನ್ ಕಾಣೆಯಾಗಿದೆ. ಅವರು ಮನೆಗೆ ಬರಲು ಆ ಮಾರ್ಗವನ್ನು(ಕೊನೆಯ ಸ್ಥಳದ ಪ್ರಕಾರ) ಬಳಸಿರಬಹುದು. ವಿಮಾನ ಅಪಘಾತದಲ್ಲಿ ಕೆಳಗಡೆ ಸಾವನ್ನಪ್ಪಿದವರಲ್ಲಿ ಅವರು ಇರಬಹುದು ಎಂದು ಪರಿಶೀಲಿಸಲು ನಾವು ಡಿಎನ್ಎ ಮಾದರಿಗಳನ್ನು ನೀಡಿದ್ದೇವೆ" ಎಂದು ಹೇತಲ್ ತಿಳಿಸಿದ್ದಾರೆ.
Advertisement