
ನವದೆಹಲಿ: ಏಪ್ರಿಲ್‌ನಲ್ಲಿ ನಡೆದ ಕ್ರೂರ ಪಹಲ್ಗಾಮ್ ಭಯೋತ್ಪಾದನಾ ದಾಳಿಯನ್ನು ಖಂಡಿಸಿರುವ ಜಾಗತಿಕ ಸಂಸ್ಥೆ ಹಣಕಾಸು ಕ್ರಿಯಾ ಕಾರ್ಯಪಡೆ (FATF) ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಎದುರಿಸಲು ದೇಶಗಳು ಕೈಗೊಂಡಿರುವ ಕ್ರಮಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿರುವುದಾಗಿ ಸೋಮವಾರ ಹೇಳಿದೆ.
"ಭಯೋತ್ಪಾದಕ ದಾಳಿಗಳು ಪ್ರಪಂಚದಾದ್ಯಂತ ಕೊಲ್ಲುತ್ತವೆ. ದುರ್ಬಲಗೊಳಿಸುತ್ತವೆ ಮತ್ತು ಭಯವನ್ನು ಹುಟ್ಟುಹಾಕುತ್ತವೆ. 22 ಏಪ್ರಿಲ್ 2025 ರಂದು ಪಹಲ್ಗಾಮ್ ನಲ್ಲಿ ನಡೆದ ಕ್ರೂರ ಭಯೋತ್ಪಾದಕ ದಾಳಿ ಕಳವಳಕಾರಿ ಹಾಗೂ ಖಂಡನೀಯವಾಗಿದೆ. ಈ ಘಟನೆ ಸೇರಿದಂತೆ ಇತ್ತೀಚಿನ ಇತರ ದಾಳಿಗಳು ಹಣ ಮತ್ತು ಭಯೋತ್ಪಾದಕರ ನಡುವೆ ಹಣಕಾಸು ಪೂರೈಕೆ ಇಲ್ಲದೆ ನಡೆಯುವುದಿಲ್ಲ ಎಂದು ಹಣಕಾಸು ಕ್ರಿಯಾ ಕಾರ್ಯಪಡೆ (FATF) ಹೇಳಿಕೆಯಲ್ಲಿ ತಿಳಿಸಿದೆ.
ಎಫ್ ಎಟಿ ಎಫ್ ಹಣಕಾಸು ಅಪರಾಧಗಳು ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆಗಟ್ಟುವ ಅಂತರ ಸರ್ಕಾರಿ ಸಂಸ್ಥೆಯಾಗಿದೆ. ಇದು ಅಂತರಾಷ್ಟ್ರೀಯ ಮಾನದಂಡಗಳು ಮತ್ತು ನೀತಿಗಳನ್ನು ರೂಪಿಸುತ್ತದೆ.
ಭಯೋತ್ಪಾದನೆಗೆ ಪಾಕಿಸ್ತಾನದ ನಿರಂತರ ಬೆಂಬಲ ಮತ್ತು ಶಸ್ತ್ರಾಸ್ತ್ರ ಸಂಗ್ರಹಣೆಗಾಗಿ ಹಣಕಾಸು ಪೂರೈಕೆಯನ್ನು ಭಾರತದ ಅಧಿಕಾರಿಗಳು ಪ್ರಮುಖವಾಗಿ ಹೇಳುತ್ತಿರುವಂತೆಯೇ ಎಫ್ ಎಟಿಎಫ್ ಇದೀಗ ಈ ಹೇಳಿಕೆ ನೀಡಿದೆ.
ಪಾಕಿಸ್ತಾನದ ಇಂತಹ ಕ್ರಮವು ಆ ದೇಶವನ್ನು ಎಫ್‌ಎಟಿಎಫ್‌ನ "ಗ್ರೇ ಲಿಸ್ಟ್" (ಬೂದು ಪಟ್ಟಿ) ಸೇರಿಸಲು ಸಮರ್ಥಿಸುತ್ತದೆ. ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು 26 ಜನರನ್ನು ಬಲಿ ಪಡೆದಿದ್ದರು.
ಪಾಕಿಸ್ತಾನವು ಜಾಗತಿಕ ಉಗ್ರರಿಗೆ ಸುರಕ್ಷಿತ ಆಶ್ರಯವನ್ನು ನೀಡಿದೆ ಮತ್ತು ಮೇ 7 ರ ಭಾರತೀಯ ಸೇನಾ ದಾಳಿಯಲ್ಲಿ ಹತರಾದ ಉಗ್ರರ ಅಂತ್ಯಕ್ರಿಯೆಯಲ್ಲಿ ಹಿರಿಯ ಮಿಲಿಟರಿ ಅಧಿಕಾರಿಗಳು ಉಪಸ್ಥಿತಿಯಿಂದ ಇದು ಸ್ಪಷ್ಟವಾಗಿದೆ ಎಂದು ಭಾರತವು ನಿರಂತರವಾಗಿ ಪ್ರತಿಪಾದಿಸಿದೆ.
ಆಗಸ್ಟ್ 25 ರಂದು ಎಪಿಜಿ ಸಭೆ: ಆಗಸ್ಟ್ 25 ರಂದು FATFನ ಏಷ್ಯಾ ಪೆಸಿಫಿಕ್ ಗ್ರೂಪ್ (APG) ಮುಂದಿನ ಸಭೆ ನಡೆಯಲಿದೆ ಮತ್ತು ಅಕ್ಟೋಬರ್ 20 ರಂದು ಮುಂದಿನ ಎಫ್‌ಎಟಿಎಫ್ ಕಾರ್ಯಕಾರಿ ಗುಂಪಿನ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಫ್ ಎಟಿಎಫ್ ನ ಹಣಕಾಸು ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ಮಾನದಂಡಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಲೋಪಗಳು ಮತ್ತು ದಾಖಲೆಯನ್ನು ಭಾರತ ಸಿದ್ಧಪಡಿಸುತ್ತಿದೆ.
ಪಾಕಿಸ್ತಾನಕ್ಕೆ 'ಗ್ರೇ ಲಿಸ್ಟ್ ಭೀತಿ' ಪಾಕಿಸ್ತಾನವನ್ನು 'ಗ್ರೇ ಲಿಸ್ಟ್' ಗೆ ಪಟ್ಟಿ ಮಾಡಲು ಭಾರತ FATF ಗೆ ಬೇಡಿಕೆ ಸಲ್ಲಿಸಲಿದೆ ಎನ್ನಲಾಗಿದೆ. ಪ್ರಸ್ತುತ FATF 'ಗ್ರೇ ಲಿಸ್ಟ್' ನಲ್ಲಿ 24 ದೇಶಗಳಿವೆ. ಈ ಪಟ್ಟಿಯಲ್ಲಿ ಸೇರಿಸಲಾದ ದೇಶಗಳ ಮೇಲೆ ಅತ್ಯಂತ ಕಠಿಣ ಅಂತರರಾಷ್ಟ್ರೀಯ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಬೂದು ಪಟ್ಟಿಯು ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ತಡೆಗಟ್ಟುವಲ್ಲಿ ಕೆಲವು ನ್ಯೂನತೆಗಳನ್ನು ಹೊಂದಿರುವ ದೇಶಗಳನ್ನು ಒಳಗೊಂಡಿದೆ.
ಫೆಬ್ರವರಿ 2008 ರ ಹಿಂದಿನಿಂದಲೂ ಗ್ರೇ ಲಿಸ್ಟ್ ನಲ್ಲಿ ಪಾಕಿಸ್ತಾನದ ಹೆಸರು ಕೇಳಿಬರುತ್ತಿದೆ. ಜೂನ್ 2010 ರಲ್ಲಿ ಅದನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಫೆಬ್ರವರಿ 2012 ರಲ್ಲಿ ಮತ್ತೆ ತರಲಾಗಿತ್ತು. ಆದರೆ ಫೆಬ್ರವರಿ 2015 ರಲ್ಲಿ ಮತ್ತೆ ಪಟ್ಟಿಯಿಂದ ತೆಗೆದುಹಾಕಲಾಯಿತು.
Advertisement