
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನ ಬಿ ಜೆ ವೈದ್ಯಕೀಯ ಕಾಲೇಜಿಗೆ ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ 56 ವರ್ಷದ ನಿರ್ಮಾಣ ಉದ್ಯಮಿ ರಾಜು ಪಟೇಲ್ ಅವರು ಯಾವುದೇ ಹಿಂಜರಿಕೆ ಇಲ್ಲದೆ ರಕ್ಷಣಾ ಕಾರ್ಯಾಚರಣೆಗೆ ನೆರವಾದರು.
ರಾಜು ಪಟೇಲ್ ಅವರು ಸ್ಥಳಕ್ಕೆ ಆಗಮಿಸಿದಾಗ ಅಲ್ಲಿ ದಟ್ಟ ಹೊಗೆ ಆವರಿಸಿತ್ತು ಮತ್ತು ಬೆಂಕಿಯ ಜ್ವಾಲೆಯಲ್ಲಿ ಹಲವರು ಸಹಾಯಕ್ಕಾಗಿ ಕೂಗುತ್ತಿದ್ದರು.
ಬೆಂಕಿ ಜ್ವಾಲೆ ಮತ್ತು ಹೊಗೆಯ ನಡುವೆ ರಾಜು ಅವರು ಗಾಯಾಳುಗಳನ್ನು ಸ್ಥಳಾಂತರಿಸಲು ಸಹಾಯ ಮಾಡಿದರು. ನಂತರ ಅವಶೇಷಗಳಲ್ಲಿದ್ದ ಚಿನ್ನದ ಆಭರಣ, ನಗದು ಹಾಗೂ ಇತರೆ ದಾಖಲೆಗಳಿಗಾಗಿ ಶೋಧಿಸುವ ಕೆಲಸ ಮಾಡಿದರು ಮತ್ತು ಅದನ್ನು ತನಿಖಾ ಅಧಿಕಾರಿಗಳಿಗೆ ಹಸ್ತಾಂತರಿಸಿದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
"ಮೊದಲ 15 ರಿಂದ 20 ನಿಮಿಷಗಳ ಕಾಲ, ನಾವು ಹತ್ತಿರ ಬರಲು ಸಾಧ್ಯವಾಗಲಿಲ್ಲ. ಬೆಂಕಿ ತುಂಬಾ ತೀವ್ರವಾಗಿತ್ತು. ಆದರೆ ಅಗ್ನಿಶಾಮಕ ದಳ, ನಂತರ 108 ಆಂಬ್ಯುಲೆನ್ಸ್‌ಗಳು ಬಂದ ನಂತರ, ನಾವು ಸಹಾಯ ಮಾಡಲು ಧಾವಿಸಿದೆವು" ಎಂದು 56 ವರ್ಷದ ರಾಜು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಸ್ಥಳದಲ್ಲಿ ಯಾವುದೇ ಸ್ಟ್ರೆಚರ್‌ಗಳು ಕಾಣಿಸದ ಕಾರಣ, ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳಿಗೆ ಸಾಗಿಸಲು ಸೀರೆ ಮತ್ತು ಬೆಡ್‌ಶೀಟ್‌ಗಳನ್ನು ಬಳಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಸಂಜೆ 4 ಗಂಟೆಯ ಹೊತ್ತಿಗೆ ರಕ್ಷಣಾ ಕಾರ್ಯ ಬಹುತೇಕ ಪೂರ್ಣಗೊಂಡ ನಂತರ, ರಾಜು ಪಟೇಲ್ ಮತ್ತು ಅವರ ತಂಡವು ಮತ್ತೊಂದು ನಿರ್ಣಾಯಕ ಕಾರ್ಯಕ್ಕೆ ಕೈಹಾಕಿತು. ಅವರು ಎಲ್ಲೆಡೆ ಹರಡಿಕೊಂಡಿದ್ದ ಸುಟ್ಟ ಚೀಲಗಳನ್ನು ಶೋಧಿಸಲು ಆರಂಭಿಸಿದರು. ಈ ವೇಳೆ "ಬಳೆಗಳು ಮತ್ತು ಇತರ ಆಭರಣಗಳ ಜೊತೆಗೆ ಪೆಟ್ಟಿಗೆಗಳಲ್ಲಿ 70 ತೊಲ ಚಿನ್ನದ ಆಭರಣಗಳು ಸಿಕ್ಕಿವೆ. ಚೀಲಗಳಿಂದ ನಮಗೆ 80,000 ರೂ. ನಗದು, ಭಗವದ್ಗೀತೆಯ ಪ್ರತಿ ಮತ್ತು ಪಾಸ್‌ಪೋರ್ಟ್‌ಗಳು ಸಹ ಸಿಕ್ಕಿದ್ದು, ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ ಎಂದು ಹೇಳಿದ್ದಾರೆ.
Advertisement