
ಅಹಮದಾಬಾದ್: ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ಅವರು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಅದೇ ವಿಮಾನದಲ್ಲಿ ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಅವರ ಸಹೋದರ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಲೀಸೆಸ್ಟರ್‌ನ 40 ವರ್ಷದ ಭಾರತೀಯ ಮೂಲದ ಬ್ರಿಟಿಷ್ ಉದ್ಯಮಿ ವಿಶ್ವಾಸ್ ಅವರನ್ನು ಮಂಗಳವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.
ಡಿಎನ್‌ಎ ಪರೀಕ್ಷೆ ಮೂಲಕ ವಿಶ್ವಾಸ್ ಅವರ ಸಹೋದರ ಅಜಯ್ ಅವರ ಮೃತದೇಹದ ಗುರುತನ್ನು ದೃಢಪಡಿಸಿದ ನಂತರ ಬುಧವಾರ ಬೆಳಗ್ಗೆ ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್ ಜೋಶಿ ವರದಿಗಾರರಿಗೆ ತಿಳಿಸಿದ್ದಾರೆ.
"ವಿಶ್ವಾಸ್ ಅವರ ಕುಟುಂಬವು ಈಗಾಗಲೇ ಯುನೈಟೆಡ್ ಕಿಂಗ್‌ಡಮ್‌ನಿಂದ ಇಲ್ಲಿಗೆ ಬಂದಿದೆ. ಅವರು ಚೇತರಿಸಿಕೊಂಡ ನಂತರ, ಮಂಗಳವಾರ ಸಂಜೆ 7.30 ಕ್ಕೆ ನಾವು ವಿಶ್ವಾಸ್‌ಗೆ ಡಿಸ್ಚಾರ್ಜ್ ಮಾಡಿದ್ದೇವೆ ಮತ್ತು ಡಿಎನ್‌ಎ ಹೊಂದಾಣಿಕೆಯ ನಂತರ ಅವರ ಸಹೋದರನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು" ಎಂದು ಅವರು ಹೇಳಿದ್ದಾರೆ.
ಡಿಯು ಮೂಲದವರಾದ ವಿಶ್ವಾಸ್ ಮತ್ತು ಅಜಯ್, ಕೇಂದ್ರಾಡಳಿತ ಪ್ರದೇಶದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆದ ನಂತರ ಏರ್ ಇಂಡಿಯಾ ವಿಮಾನದಲ್ಲಿ ಲಂಡನ್‌ಗೆ ಹಿಂತಿರುಗುತ್ತಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ, ದಮನ್ ಮತ್ತು ಡಿಯು ಕೇಂದ್ರಾಡಳಿತ ಪ್ರದೇಶವಾದ ಡಿಯುನಲ್ಲಿ ವಿಶ್ವಾಸ್ ಅವರು ತನ್ನ ಸಹೋದರನ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಸ್ಮಶಾನ ಸ್ಥಳಕ್ಕೆ ಹೋಗುತ್ತಿರುವುದನ್ನು ಕಾಣಬಹುದು.
Advertisement