
ಮುಂಬೈ: ಮಹಾಯುತಿ ಸರ್ಕಾರ ಮಂಗಳವಾರ ರಾತ್ರಿ ರಾಜ್ಯದ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ಹಿಂದಿಯನ್ನು ಮೂರನೇ ಐಚ್ಛಿಕ ಮತ್ತು ಕಡ್ಡಾಯ ಭಾಷೆಯಾಗಿ ಕಲಿಸಲು ಸರ್ಕಾರಿ ಆದೇಶ ಹೊರಡಿಸಿದೆ.
ಕೆಲವು ಮರಾಠಿ ಭಾಷಾ ವಕೀಲರು ಸರ್ಕಾರವು ಆರಂಭದಲ್ಲಿ ಹಿಂದೆ ಸರಿದು ಈಗ "ಹಿಂಬಾಗಿಲಿನ" ಮೂಲಕ ಹಿಂದಿ ನೀತಿಯನ್ನು ಮರುಪರಿಚಯಿಸಿದೆ ಎಂದು ಆರೋಪಿಸಿದರೆ, ವಿರೋಧ ಪಕ್ಷ ಕಾಂಗ್ರೆಸ್, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮರಾಠಿಗರ ಎದೆಗೆ "ಇರಿಯುವ" ಕೆಲಸ ಮಾಡಿದ್ದಾರೆ ಎಂದು ಕಿಡಿ ಕಾರಿದೆ.
ಹಿಂದಿ "ಸಾಮಾನ್ಯವಾಗಿ" ಮೂರನೇ ಭಾಷೆಯಾಗಿರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಆದರೆ ಶಾಲೆಯಲ್ಲಿ ಪ್ರತಿ ತರಗತಿಗೆ 20 ವಿದ್ಯಾರ್ಥಿಗಳು ಹಿಂದಿ ಹೊರತುಪಡಿಸಿ ಇತರೆ ಯಾವುದೇ ಭಾರತೀಯ ಭಾಷೆ ಅಧ್ಯಯನ ಮಾಡುವ ಬಯಕೆ ವ್ಯಕ್ತಪಡಿಸಿದರೆ ಅದನ್ನು ಕಲಿಸುವ ಆಯ್ಕೆಯನ್ನು ನೀಡಿದೆ.
ಆದಾಗ್ಯೂ, ರಾಜ್ಯ ಶಾಲಾ ಶಿಕ್ಷಣ ಇಲಾಖೆ ಹಿಂದಿ ಹೊರತುಪಡಿಸಿ ಮೂರನೇ ಭಾಷೆಗೆ ಶಿಕ್ಷಕರನ್ನು ಒದಗಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಂಡಿದೆ. 20 ವಿದ್ಯಾರ್ಥಿಗಳು ಫ್ರೆಂಚ್ ಅಥವಾ ಸ್ಪ್ಯಾನಿಷ್‌ನಂತಹ ಬೇರೆ ಭಾಷೆಯನ್ನು ಅಧ್ಯಯನ ಮಾಡಲು ತೀವ್ರ ಆಸಕ್ತಿ ತೋರಿಸಿದರೆ, ಆ ನಿರ್ದಿಷ್ಟ ಭಾಷೆಯ ಶಿಕ್ಷಕರನ್ನು ಶಾಲೆಗೆ ಒದಗಿಸುವುದು ಕಡ್ಡಾಯವಲ್ಲ. ಹೀಗಾಗಿ, ಹಿಂದಿ ಹೊರತುಪಡಿಸಿ ಇತರ ಭಾಷೆಗಳನ್ನು ಡಿಜಿಟಲ್ ವೇದಿಕೆಗಳ ಮೂಲಕ ಕಲಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಎಲ್ಲಾ ಮಾಧ್ಯಮ ಶಾಲೆಗಳಲ್ಲಿ ಮರಾಠಿ ಕಡ್ಡಾಯ ಭಾಷೆಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
'ಹಿಂಬಾಗಿಲ ಮೂಲಕ ಹಿಂದಿ ಹೇರಿಕೆ'
"ಇದು ಹಿಂಬಾಗಿಲ ಮೂಲಕ ಹಿಂದಿ ಹೇರಿಕೆಯಲ್ಲದೆ ಬೇರೇನೂ ಅಲ್ಲ" ಎಂದು ಮರಾಠಿಪರ ಹೋರಾಟಗಾರ ಮುಂಬೈ ಮೂಲದ ಮರಾಠಿ ಭಾಷಾ ಅಭ್ಯಾಸ ಕೇಂದ್ರದ ದೀಪಕ್ ಪವಾರ್ ಅವರು ಹೇಳಿದ್ದಾರೆ.
"ಸರ್ಕಾರವು ಮರಾಠಿ ಜನರಿಗೆ ದ್ರೋಹ ಮಾಡಿದೆ. ನಾವು ಈಗ ಮೌನವಾಗಿದ್ದರೆ, ಅದು ಒಕ್ಕೂಟ ರಚನೆ ಮತ್ತು ಸಂಯುಕ್ತ ಮಹಾರಾಷ್ಟ್ರ ಚಳವಳಿಯ ಪರಂಪರೆಯನ್ನು ಕೆಡವಲು ದಾರಿ ಮಾಡಿಕೊಡುತ್ತದೆ" ಎಂದು ಪವಾರ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ ಮತ್ತು ಜನ ಇದರ ವಿರುದ್ಧ ಪ್ರತಿಭಟಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement