
ನವದೆಹಲಿ: ದೇಶದಲ್ಲಿ ಭಾರತೀಯ ಪ್ರಮಾಣಿತ (IST) ಮತ್ತು ನಿಖರ ಸಮಯ ಪ್ರಸರಣಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, 'ಒನ್ ನೇಷನ್ ಒನ್ ಟೈಂ' ಆರಂಭಿಸುವ ಕುರಿತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ದುಂಡು ಮೇಜಿನ ಸಮ್ಮೇಳನ ನಡೆಸಿತು.
ವಿಜ್ಞಾನ ಭವನದಲ್ಲಿ ವಿವಿಧ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳ ಪ್ರಮುಖರೊಂದಿಗೆ ಮಹತ್ವದ ಚರ್ಚೆ ನಡೆಸಲಾಯಿತು. ಭಾರತೀಯ ತಂತ್ರಜ್ಞಾನ ಆಧಾರಿತ ಜಿಪಿಎಸ್ ಹಾಗೂ ನಿಖರ ಸಮಯ ಅನುಸರಣೆ ಬಗ್ಗೆ ಚಿಂತನ-ಮಂಥನ ನಡೆಯಿತು.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ʼಒನ್ ನೇಷನ್ ಒನ್ ಟೈಂʼ ದೃಷ್ಟಿಕೋನ ಭಾರತದ ಡಿಜಿಟಲ್ ಮತ್ತು ಆಡಳಿತಾತ್ಮಕ ದಕ್ಷತೆಯ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ. ಅಲ್ಲದೇ, ವಂಚನೆ ಮತ್ತು ಸೈಬರ್ ದುರ್ಬಲತೆ, ವಿದೇಶಿ ಸಮಯ ಮೂಲಗಳ ಮೇಲಿನ ಅವಲಂಬನೆ ಹಾಗೂ ಅಪಾಯಗಳಿಗೆ ಇದು ಪರಿಹಾರವಾಗಲಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
ದೇಶಾದ್ಯಂತ ವಿಶ್ವಾಸಾರ್ಹ ಮತ್ತು ಪ್ರಮಾಣೀಕೃತ ಡಿಜಿಟಲ್ ಪರಿಸರ ವ್ಯವಸ್ಥೆಗೆ ಇದು ಪ್ರಮುಖ ಹೆಜ್ಜೆಯಾಗಿದೆ. ರಾಷ್ಟ್ರೀಯ ಸಮಯ ಸಾರ್ವಭೌಮತ್ವವನ್ನು ಸಾರುವ ಕಡೆಗೆ ನಿರ್ಣಾಯಕ ಹೆಜ್ಜೆಯಾಗಿದೆ. ಸಾಮಾನ್ಯ ಜನರಿಗೆ ಹೆಚ್ಚಿನ ಸುರಕ್ಷಿತ ಡಿಜಿಟಲ್ ವಹಿವಾಟು, ನಿಖರ ಸಮಯದ ಬಿಲ್ಲಿಂಗ್, ಸೈಬರ್ ಅಪರಾಧದ ಅಪಾಯದಿಂದ ರಕ್ಷಿಸುವುದು, ಸಾರಿಗೆ ಮತ್ತು ಸಂವಹನದಲ್ಲಿ ಸಮಯಪಾಲನೆ, ನ್ಯಾಯಸಮ್ಮತ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ʼಒನ್ ನೇಷನ್ ಒನ್ ಟೈಂʼ ಖಚಿತಪಡಿಸುತ್ತದೆ ಎಂದು ಜೋಶಿ ಪ್ರತಿಪಾದಿಸಿದರು.
NTP ಮತ್ತು PTP ಯಂತಹ ಸುರಕ್ಷಿತ ಪ್ರೋಟೋಕಾಲ್‌ಗಳನ್ನು ಹೊಂದಿದ 5 ಪ್ರಾದೇಶಿಕ ಉಲ್ಲೇಖ ಪ್ರಮಾಣಿತ ಪ್ರಯೋಗಾಲಯಗಳ (RRSLs) ಮೂಲಕ ಇಂಡಿಯನ್ ಸ್ಟ್ಯಾಂಡರ್ಡ್ ಟೈಂ (IST) ಅನ್ನು ಮಿಲಿ ಸೆಕೆಂಡ್‌ನಿಂದ ಮೈಕ್ರೋ ಸೆಕೆಂಡ್‌ಗೆ ನಿಖರತೆಯೊಂದಿಗೆ ತಲುಪಿಸುವ ಗುರಿಯನ್ನು ಇದು ಹೊಂದಿದೆ ಎಂದು ಹೇಳಿದರು.
ಸಮಯ ಪ್ರಸರಣ ಯೋಜನೆಯಡಿ ಗ್ರಾಹಕ ವ್ಯವಹಾರಗಳ ಇಲಾಖೆ CSIR-NPL ಮತ್ತು ISRO ಸಹಯೋಗದಲ್ಲಿ ಅಹಮದಾಬಾದ್, ಬೆಂಗಳೂರು, ಭುವನೇಶ್ವರ, ಫರಿದಾಬಾದ್ ಮತ್ತು ಗುವಾಹಟಿಯಲ್ಲಿ 5 ಪ್ರಾದೇಶಿಕ ಪ್ರಮಾಣಿತ ಪ್ರಯೋಗಾಲಯಗಳನ್ನು (RRSL) ಸ್ಥಾಪಿಸುತ್ತಿದೆ. ಈ ಕೇಂದ್ರಗಳು ಮಿಲಿ ಸೆಕೆಂಡ್‌ನಿಂದ ಮೈಕ್ರೋ ಸೆಕೆಂಡ್ ನಿಖರತೆ ಖಚಿತಪಡಿಸಿಕೊಳ್ಳಲು ನೆಟ್‌ವರ್ಕ್ ಟೈಮ್ ಪ್ರೋಟೋಕಾಲ್ (NTP) ಮತ್ತು ನಿಖರ ಸಮಯ ಪ್ರೋಟೋಕಾಲ್ (PTP) ಬಳಸಿಕೊಂಡು ಪರಮಾಣು ಗಡಿಯಾರಗಳು ಮತ್ತು ಸುರಕ್ಷಿತ ಸಿಂಕ್ರೊನೈಸೇಶನ್ ವ್ಯವಸ್ಥೆಗಳನ್ನು ಹೊಂದಿವೆ ಎಂದು ತಿಳಿಸಿದರು.
ಈ ದುಂಡು ಮೇಜಿನ ಸಮ್ಮೇಳನದಲ್ಲಿ ದೂರಸಂಪರ್ಕ ಇಲಾಖೆ, ವಿದ್ಯುತ್ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಹಣಕಾಸು ಸಚಿವಾಲಯ, ಸೆಬಿ, ಎನ್‌ಎಸ್‌ಸಿಎಸ್, ರೈಲ್ವೆ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಂತಹ ಪ್ರಮುಖ ಸರ್ಕಾರಿ ಸಚಿವಾಲಯಗಳು ಹಾಗೂ ಇಲಾಖೆಗಳ ಹಿರಿಯ ಅಧಿಕಾರಿಗಳು, ಇಸ್ರೋದ ತಂತ್ರಜ್ಞರು ಸಭೆಯಲ್ಲಿ ಭಾಗವಹಿಸಿದ್ದರು.
Advertisement